ಗೋಕಾಕ್​ಗೆ ಹೆಬ್ಬಾಳ್ಕರ್ ಎಂಟ್ರಿ ‌ಬೆನ್ನಲ್ಲೇ ರಮೇಶ್​ ಜಾರಕಿಹೊಳಿ ಅಲರ್ಟ್​: ಶೆಟ್ಟರ್ ಜತೆ ಸಮಾಲೋಚನೆ

ಲೋಕಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿರುವಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅಲರ್ಟ್ ಆಗಿದ್ದಾರೆ. ಗೋಕಾಕ್ ಕ್ಷೇತ್ರಕ್ಕೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಎಂಟ್ರಿ ಆಗುತ್ತಿದ್ದಂತೆಯೇ ಬೆಳಗಾವಿಗೆ ಧಾವಿಸಿರುವ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಜೊತೆ ಸುಧೀರ್ಘ ಸವಾಲೋಚನ ನಡೆಸಿದ್ದಾರೆ.

ಗೋಕಾಕ್​ಗೆ ಹೆಬ್ಬಾಳ್ಕರ್ ಎಂಟ್ರಿ ‌ಬೆನ್ನಲ್ಲೇ ರಮೇಶ್​ ಜಾರಕಿಹೊಳಿ ಅಲರ್ಟ್​: ಶೆಟ್ಟರ್ ಜತೆ ಸಮಾಲೋಚನೆ
ರಮೇಶ್​ ಜಾರಕಿಹೊಳಿ & ಜಗದೀಶ್ ಶೆಟ್ಟರ್
Updated By: Ganapathi Sharma

Updated on: Mar 29, 2024 | 8:55 AM

ಬೆಳಗಾವಿ, ಮಾರ್ಚ್​ 29: ಗೋಕಾಕ್​ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಂಟ್ರಿಯಾದ ‌ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ​​ರಮೇಶ್​ ಜಾರಕಿಹೊಳಿ (Ramesh Jarkiholi) ಬೆಳಗಾವಿಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಬೆಳಗಾವಿ ಹಾಲಿ ಸಂಸದೆ ಮಂಗಳಾ ಅಂಗಡಿ ಅವರ ವಿಶ್ವೇಶ್ವರಯ್ಯ ನಗರದಲ್ಲಿರುವ ನಿವಾಸದಲ್ಲಿ ಉಭಯ ನಾಯಕರ ಸಭೆ ನಡೆದಿದೆ. ಚುನಾವಣೆ ತಂತ್ರದ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲಿಸಲು ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ.

ಒಂದೂವರೆ ಗಂಟೆಗಳ ಕಾಲ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ಚುನಾವಣೆ ತಂತ್ರಗಾರಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದೇ ವೇಳೆ, ಸೋಮವಾರದಿಂದ ಚುನಾವಣೆ ಪ್ರಚಾರಕ್ಕೆ ಬರುವುದಾಗಿ ರಮೇಶ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಹೇಗಾದರೂ ಮಾಡಿ ಬಿಜೆಪಿಯನ್ನು ಗೆಲ್ಲಿಸಬೇಕು. ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿನ ಸೇಡನ್ನು ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ರಮೇಶ್ ಹಾಕಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಪ್ರಯತ್ನಿಸಿ ರಮೇಶ್ ವಿಫಲರಾಗಿದ್ದರು. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಸೋಲಿಸಲು ಬಿಜೆಪಿಯ ಜಾರಕಿಹೊಳಿ ಸಹೋದರರು ತಂತ್ರ ಹೆಣೆಯುತ್ತಿದ್ದಾರೆ.

ಮತ್ತೊಂದೆಡೆ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮೃಣಾಲ್‌ ಬೆನ್ನಿಗೆ ನಿಂತಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಮೃಣಾಲ್‌ ಜೊತೆಗೆ ಸತೀಶ್ ಜಾರಕಿಹೊಳಿ ಪ್ರಚಾರಾಭಿಯಾನ ನಡೆಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭ್ಯರ್ಥಿ ಮೃಣಾಲ್‌ ಜೊತೆಗೆ ಕಾಂಗ್ರೆಸ್ ‌ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂಂಡಾ, ರೌಡಿ ಎಂದ ಯತೀಂದ್ರ ಸಿದ್ದರಾಮಯ್ಯ

ಈ ಮಧ್ಯೆ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಸ್ಥಳೀಯ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿರುವ ಮನಸನ್ನು ತಣಿಸುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ. ಇದೀಗ ರಮೇಶ್ ಜಾರಕಿಹೊಳಿ ಕೂಡ ಶೆಟ್ಟರ್ ಬೆನ್ನಿಗೆ ನಿಂತಿರುವುದು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಬಲ ತಂದುಕೊಟ್ಟಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ