ಬೆಳಗಾವಿ: ಬಾಚಿ ಚೆಕ್‌ಪೋಸ್ಟ್ ಬಳಿ ತೀವ್ರ ಕಟ್ಟೆಚ್ಚರ; 72 ಗಂಟೆ ಅವಧಿಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಬೆಳಗಾವಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಬೆಳಗಾವಿ ಹೊರವಲಯ ಬಾಚಿ ಚೆಕ್‌ಪೋಸ್ಟ್ ಬಳಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ಸ್ಥಳದಲ್ಲೇ ಒಂದು ಕೆಎಸ್‌ಆರ್‌ಪಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿ: ಬಾಚಿ ಚೆಕ್‌ಪೋಸ್ಟ್ ಬಳಿ ತೀವ್ರ ಕಟ್ಟೆಚ್ಚರ; 72 ಗಂಟೆ ಅವಧಿಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಬಾಚಿ ಚೆಕ್‌ಪೋಸ್ಟ್ ಬಳಿ ತೀವ್ರ ಕಟ್ಟೆಚ್ಚರ
Updated By: preethi shettigar

Updated on: Aug 08, 2021 | 1:23 PM

ಬೆಳಗಾವಿ: ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶ ಯಥಾವತ್ತಾಗಿ ಜಾರಿಯಾಗಿದೆ. ವೀಕೆಂಡ್ ಕರ್ಪ್ಯೂ (Weekend Curfew) ಹಿನ್ನೆಲೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಬಂದ್ ಘೋಷಿಸಲಾಗಿದೆ. ಅಲ್ಲದೇ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ ಹಿನ್ನಲೆ ಬೆಳಗಾವಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಬೆಳಗಾವಿ ಹೊರವಲಯ ಬಾಚಿ ಚೆಕ್‌ಪೋಸ್ಟ್ ಬಳಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ಸ್ಥಳದಲ್ಲೇ ಒಂದು ಕೆಎಸ್‌ಆರ್‌ಪಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಪ್ರತಿಯೊಂದು ವಾಹನ ತಪಾಸಣೆ ನಡೆಸಿ ಒಳಬಿಡುತ್ತಿರುವ ಪೊಲೀಸರು
ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಬಾಚಿ ಚೆಕ್‌ಪೋಸ್ಟ್​ಗೆ ಡಿಸಿಪಿ ವಿಕ್ರಂ ಆಮಟೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 72 ಗಂಟೆ ಅವಧಿಯೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯಕ್ಕೆ ಪ್ರವೇಶ. ಆರ್‌ಟಿಪಿಸಿಆರ್ ವರದಿ ಇಲ್ಲದವರನ್ನು ಪೊಲೀಸರು ವಾಪಾಸ್ಸು ಕಳುಹಿಸುತ್ತಿದ್ದಾರೆ. ಮೆಡಿಕಲ್ ಅನಿವಾರ್ಯತೆ, ತುರ್ತುಸೇವೆಗೆ ಆಗಮಿಸುವವರಿಗೆ ಸ್ಥಳದಲ್ಲೇ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಡಿಸಿಪಿ ವಿಕ್ರಂ ಆಮಟೆ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 4 ಅಂತರಾಜ್ಯ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಅದೇ ರೀತಿ ನಗರದ ರೇಲ್ವೆ ನಿಲ್ದಾಣ, ಬಸ್​ ನಿಲ್ದಾಣದಲ್ಲೂ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರ ರ್ಯಾಪಿಡ್ ಆ್ಯಂಟಿಜೆನ್ ಪಟ್ಟಿ ಮಾಡಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಐವರು, ರೇಲ್ವೆ ನಿಲ್ದಾಣದಲ್ಲಿ ಒಬ್ಬರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಕೊವಿಡ್ ಪಾಸಿಟಿವ್ ಬಂದ ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದೇವೆ ಎಂದು ಡಿಸಿಪಿ ವಿಕ್ರಂ ಆಮಟೆ ತಿಳಿಸಿದ್ದಾರೆ.

ಮೈಸೂರು: ವೀಕೆಂಡ್ ಕರ್ಫ್ಯೂ ನಡುವೆಯೂ ಬಸ್ ಸಂಚಾರಕ್ಕೆ ಅವಕಾಶ
ವೀಕೆಂಡ್ ಕರ್ಫ್ಯೂ ನಡುವೆಯೂ ಮೈಸೂರಿನಿಂದ ಬೇರೆ ಜಿಲ್ಲಾ ಕೇಂದ್ರಗಳಿಗೆ ಸಾರಿಗೆ ಬಸ್​ಗಳು ಸಂಚರಿಸುತ್ತಿವೆ. ಆದರೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ದೂರದ ಊರುಗಳಿಗೆ ತೆರಳುವ ಬಸ್​ಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಆಗಮನಕ್ಕಾಗಿ ಸಾರಿಗೆ ಸಿಬ್ಬಂದಿಗಳು ಕಾದು ಕುಳಿತಿದ್ದಾರೆ.

ವಿಜಯಪುರ: ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಜಾರಿ
ಮಹಾರಾಷ್ಟ್ರದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ವ್ಯಾಪಕ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಭಾಗದಲ್ಲಿ 11 ಚೆಕ್​ಪೋಸ್ಟ್​ ನಿರ್ಮಾಣ ಮಾಡಲಾಗಿದೆ. ತಪಾಸಣಾ ಕಾರ್ಯಕ್ಕೆ ಓರ್ವ ಆರೋಗ್ಯ ಸಿಬ್ಬಂದಿ ಮಾತ್ರ ಹಾಜರಾಗಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು ಗೈರಾಗಿದ್ದಾರೆ. ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಲಬುರಗಿ: ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆ ಮದ್ಯದಂಗಡಿಗೆ ಗ್ರಾಹಕರು ಆಗಮಿಸುತ್ತಿಲ್ಲ. ಕಲಬುರಗಿ ನಗರದ‌ ಬಹುತೇಕ ಮದ್ಯದಂಗಡಿಗಳು ಖಾಲಿಯಾಗಿವೆ. ಎರಡು ಗಂಟೆವರಗೆ ಮದ್ಯ ಪಾರ್ಸಲ್ ತೆಗೆದುಕೊಳ್ಳಲು ಅ‌ವಕಾಶ ಇದ್ದರೂ ಮದ್ಯ ಖರೀದಿಸಲು ಜನರು ಹಿಂದೇಟು ಹಾಕಿದ್ದಾರೆ.

ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೊವಿಡ್ ನಿಯಮ ಉಲ್ಲಂಘನೆ
ಯಶವಂತಪುರ, ಕೆ.ಆರ್.ಮಾರುಕಟ್ಟೆಗಳಲ್ಲಿ ಜನಜಂಗುಳಿ ಉಂಟಾಗಿದ್ದು, ಜನರು ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ನಿರ್ಲಕ್ಷ್ಯ ತೋರಿದ್ದಾರೆ. ಶಿವಾಜಿನಗರದಲ್ಲಿ ಮೀನು, ಮಾಂಸ ಖರೀದಿಗೆ ಜನರು ಮುಗಿಬಿದಿದ್ದು, ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.

ಇದನ್ನೂ ಓದಿ:
ಮತ್ತೆ ಮರುಕಳಿಸಲಿದೆ ಆ ದಿನಗಳು; ಬೆಂಗಳೂರಿನ ಕೆಲ ಕಡೆ ಸೀಲ್​ ಡೌನ್, ಹೈರಿಸ್ಕ್ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

ವೀಕೆಂಡ್​ ಕರ್ಫ್ಯೂ: ಯಾವ ಯಾವ ಜಿಲ್ಲೆಗಳಲ್ಲಿ ಏನು ಕ್ರಮ? ಮನೆಯಿಂದ ಹೊರಬರುವ ಮುನ್ನ ಗಮನಿಸಿ

Published On - 12:52 pm, Sun, 8 August 21