ಸಂತೋಷ್ ಆತ್ಮಹತ್ಯೆ ಕೇಸ್; ಉಡುಪಿ ಪೊಲೀಸರ ಕೈಸೇರಿದ ಪ್ರಾಥಮಿಕ ವರದಿ, ಆತ್ಮಹತ್ಯೆಗೆ ಸಾಕ್ಷಿ ಎಂಬಂತೆ ಮತ್ತಷ್ಟು ಪುರಾವೆ ಪತ್ತೆ
ವೈದ್ಯರು ಕೇಸ್‌ನ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಆದ್ರೆ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ಸಾವಿಗೆ ಕಾರಣ ಮಾತ್ರ ತಿಳಿಸಿಲ್ಲ.
ಬೆಳಗಾವಿ: ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಸಂತೋಷ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿ ಪ್ರಕರಣದ ಪ್ರಾಥಮಿಕ ವರದಿ ಉಡುಪಿ ಪೊಲೀಸರ ಕೈಸೇರಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ಕೇಸ್‌ನ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಆದ್ರೆ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ಸಾವಿಗೆ ಕಾರಣ ಮಾತ್ರ ತಿಳಿಸಿಲ್ಲ. ಇನ್ನು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದೆ.
ಕೆಎಂಸಿ ಆಸ್ಪತ್ರೆಯ ಎಫ್‌ಎಸ್‌ಎಲ್ ವಿಭಾಗದಿಂದ ವರದಿ ಸಲ್ಲಿಕೆಯಾಗಿದೆ. ವೈದ್ಯರು ಸಾವಿಗೆ ಕಾರಣ ಏನೆಂಬುವುದನ್ನು ಕಾಯ್ದಿರಿಸಿದ್ದಾರೆ. ರಕ್ತ, ಶ್ವಾಸಕೋಶ, ಕಿಡ್ನಿ, ಚರ್ಮದ ಪರೀಕ್ಷೆ ವರದಿ ಬಾಕಿ ಇದೆ. ಎಫ್‌ಎಸ್‌ಎಲ್ ವರದಿಗಾಗಿ ಸದ್ಯ ಪೊಲೀಸರು ಕಾಯುತ್ತಿದ್ದಾರೆ. ದೇಹದ ಒಳಾಂಗಗಳ ಪರೀಕ್ಷಾ ವರದಿ ಬಂದ ನಂತರ ವೈದ್ಯರು ಅಂತಿಮ ಮರಣೋತ್ತರ ಪರೀಕ್ಷಾ ವರದಿ ನೀಡಲಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ, RFSL ವರದಿ ಎರಡೂ ವರದಿಗಳನ್ನು ವೈದ್ಯರು ಹೋಲಿಕೆ ಮಾಡಲಿದ್ದಾರೆ.
ಆತ್ಮಹತ್ಯೆಗೆ ಸಾಕ್ಷಿ ಎಂಬಂತೆ ಮತ್ತಷ್ಟು ಪುರಾವೆ ಪತ್ತೆ ಇನ್ನು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದೆ. ಘಟನಾ ಸ್ಥಳದಲ್ಲಿ ಎರಡು ಪೇಪರ್ ಗ್ಲಾಸ್, ಸ್ಟ್ರಾ ಪತ್ತೆಯಾಗಿದೆ. FSL ತಂಡ ಜ್ಯೂಸ್ ಕುಡಿಯಲು ಬಳಸಿದ್ದ ಸ್ಟ್ರಾ ವಶಕ್ಕೆ ಪಡೆದಿದೆ. ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿರುವ ಸಾಧ್ಯತೆ ಕಡಿಮೆ ಇದೆ. ಒತ್ತಾಯದಿಂದ ಕುಡಿಸಿದ್ದರೆ ಪೇಪರ್ ಗ್ಲಾಸ್ ಮುದ್ದೆಯಾಗಬೇಕಿತ್ತು. ಅಲ್ಲದೇ ಜ್ಯೂಸ್ ಕುಡಿಯಲು ಬಳಸಿದ ಸ್ಟ್ರಾಗೂ ಹಾನಿಯಾಗಬೇಕಿತ್ತು. ಪೇಪರ್ ಗ್ಲಾಸ್ & ಸ್ಟ್ರಾಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಜ್ಯೂಸ್ ಜೊತೆ ವಿಷ ಬೆರೆಸಿ ಕುಡಿದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಗ್ಲಾಸ್ನಿಂದ ನೇರ ಜ್ಯೂಸ್ ಕುಡಿದರೆ ಗುರುತು ಪತ್ತೆಯಾಗಬೇಕಿತ್ತು. ಆದರೆ ಸಂತೋಷ್ ಬಾಯಿಯಲ್ಲಿ ಯಾವುದೇ ಗುರುತು ಪತ್ತೆಯಾಗಿಲ್ಲ. ನೇರ ಸ್ಟ್ರಾ ಬಳಸಿಯೇ ಸಂತೋಷ್ ಜ್ಯೂಸ್ ಕುಡಿದಿರುವ ಸಾಧ್ಯತೆ ಇದೆ. ಸದ್ಯ ಉಡುಪಿ ಪೊಲೀಸರು ಎಫ್ಎಸ್ಎಲ್ ವರದಿಗೆ ಕಾಯುತ್ತಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಐದನೇ ದಿನವೂ ಉಡುಪಿ ಪೊಲೀಸರ ತನಿಖೆ ಮುಂದುವರೆದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾ.ಪಂ ಕಚೇರಿಗೆ ಆಗಮಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಶರಣಗೌಡ ಪಾಟೀಲ್ ನೇತೃತ್ವದ ತಂಡ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದೆ. ಕಳೆದ 3 ದಿನಗಳಿಂದ ಹಾಲಿ, ಹಿಂದಿನ ಪಿಡಿಒಗಳ ವಿಚಾರಣೆ ನಡೆಸಲಾಗಿತ್ತು. ಈ ಹಿಂದಿನ ಪಿಡಿಒ ಗಂಗಾಧರ ನಾಯಕ್, ಹಾಲಿ ಪಿಡಿಒ ವಸಂತಕುಮಾರಿ ವಿಚಾರಣೆ ನಡೆಸಿದ್ರು. 4 ಕೋಟಿ ಮೊತ್ತದ 108 ಕಾಮಗಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.