ಬೆಳಗಾವಿ, ನವೆಂಬರ್ 11: ಬೆಳಗಾವಿ ರಾಜಕಾರಣದಲ್ಲಿ (Belagavi Politics) ಹೊರಗಿನವರ ಹಸ್ತಕ್ಷೇಪದ ಬಗ್ಗೆ ಮುನಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇದೀಗ ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ. ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕೇ ವಿನಃ ನಮ್ಮ ಹಂತದಲ್ಲಿ ಏನೂ ಇಲ್ಲ. ನಾನು ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ನಿವಾಸಕ್ಕೆ ಹಲವು ಬಾರಿ ಬಂದಿದ್ದಾರೆ. ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಆಗಿದೆ. ಮೈಸೂರಿಗೆ ಹೋಗುವ ಉದ್ದೇಶ ಬೇರೆ, ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಉದ್ದೇಶವೇ ಬೇರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಡ್ಜಸ್ಟ್ಮೆಂಟ್ ಎನ್ನುವ ಪ್ರಶ್ನೆ ಇಲ್ಲ. ಲೋಕಸಭೆ ಚುನಾವಣೆಯಾದ ಬಳಿಕ ಚರ್ಚೆಗೆ ಬರಬಹುದು. ಚುನಾವಣೆ ಬಳಿಕ ಯಾವ ಹೊಸ ವಿಚಾರ ಬರುತ್ತವೆಂದು ಕಾದು ನೋಡೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸತೀಶ್ ಅವರು ಶಾಸಕರನ್ನು ಕರೆದುಕೊಂಡು ಮೈಸೂರು ಪ್ರವಾಸಕ್ಕೆ ಹೊರಡಲು ಮುಂದಾಗಿದ್ದ ವಿಚಾರ ಇತ್ತೀಚೆಗೆ ಕಾಂಗ್ರೆಸ್ನ ಆಂತರಿಕ ವಲಯದಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು. ನಂತರ ಹೈಕಮಾಂಡ್ ಮಧ್ಯ ಪ್ರವೇಶಿಸಿ ಪ್ರವಾಸ ರದ್ದಾಗುವಂತೆ ಮಾಡಿತ್ತು. ಆ ನಂತರವೂ, ಸತೀಶ್ ಜಾರಕಿಹೊಳಿ ಶಾಸಕರ ಜತೆ ದುಬೈಗೆ ಪ್ರವಾಸ ಹೋಗಲಿದ್ದಾರೆ ಎಂದೆಲ್ಲ ವದಂತಿ ಹಬ್ಬಿದ್ದವು. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ, ಶಾಸಕರು ಅವರ ದುಡ್ಡಲ್ಲಿ ಪ್ರವಾಸ ಹೋದರೆ ನಮಗೇನು, ಸರ್ಕಾರದ ದುಡ್ಡಿನಲ್ಲಿ ಹೋಗುವುದಲ್ಲವಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಜೊತೆ ಯಾವುದೇ ವೈಮನಸ್ಸಿಲ್ಲ ಅಂತ ಸಾರ್ವಜನಿಕವಾಗಿ ತೋರುವ ಪ್ರಯತ್ನ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆಯೇ?
ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ನಲ್ಲಿ ಇನ್ನೂ ಅಸಮಾಧಾನದ ಹೊಗೆಯಾಡುತ್ತಲೇ ಇದೆ ಎಂಬುದನ್ನು ನಿರೂಪಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ