ಬರದಿಂದ ಕಂಗೆಟ್ಟು ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದ ರೈತರಿಗೆ ಶಾಕ್; ಪಾವತಿಯಾಗದ ಸಂಬಳ, ರೈತರ ಪರದಾಟ
ಈ ಬಾರಿ ಭೀಕರ ಬರಗಾಲ ಹಿನ್ನೆಲೆ ಅನ್ನದಾತ ಅಕ್ಷರಶಃ ಕಂಗಾಲಾಗಿದ್ದಾನೆ. ಇತ್ತ ಬರಪೀಡಿತ ತಾಲೂಕು ಘೋಷಣೆ ಮಾಡಿರುವ ಸರ್ಕಾರ ಯಾವುದೇ ಪರಿಹಾರ ನೀಡದೇ ಕಣ್ಮುಚ್ಚಿ ಕುಳಿತಿದೆ. ಉದ್ಯೋಗ ಖಾತ್ರಿಯಾದ್ರೂ ನಮಗೆ ಆಸರೆಯಾಗುತ್ತೆ ಎಂದು ನಂಬಿಕೊಂಡು ಕೂಲಿ ಕೆಲಸಕ್ಕೆ ಹೋಗಿದ್ದ ರೈತರಿಗೆ ನಿರಾಸೆಯಾಗಿದೆ. ಜಮೀನು ಇದ್ದರೂ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿರುವ ರೈತರ ಗೋಳು ಏನು ಅಂತೀರಾ? ಇಲ್ಲಿದೆ ನೋಡಿ.
ಬೆಳಗಾವಿ, ಅ.10: ಮುಂಗಾರು ಮಳೆ ಕೈಕೊಟ್ಟು ಹಿಂದೆಂದು ಕಾಣದಂತಹ ಭೀಕರ ಬರಗಾಲಕ್ಕೆ ಬೆಳಗಾವಿ(Belagavi) ಜಿಲ್ಲೆ ಸಾಕ್ಷಿಯಾಗಿದೆ. ಅದರಲ್ಲೂ ಜಿಲ್ಲೆಯ ಚಿಕ್ಕೋಡಿ(Chikkodi) ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ, ಹುಕ್ಕೇರಿ ತಾಲೂಕಿನ ರೈತರಿಗೆ ಬರದಿಂದ ನಿತ್ಯ ನರಕ ದರ್ಶನವಾಗುತ್ತಿದೆ. ಭೀಕರ ಬರಗಾಗಲದಿಂದ ಕಂಗೆಟ್ಟ ರೈತರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಒಂದ್ ರೀತಿ ಆಸರೆಯಾಗಿತ್ತು. ಆದ್ರೆ, ಕಳೆದ ಒಂದೂವರೆ ತಿಂಗಳಿಂದ ಸಂಬಳ ಪಾವತಿಯಾಗದೇ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಅನ್ನದಾತನಿಗೆ ಬಂದೊದಗಿದೆ.
ಬೆಳಗಾವಿ ಜಿಲ್ಲೆಯಲ್ಲಿಯೇ ಸರಿಸುಮಾರು 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ನಿತ್ಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕೋಡಿ ತಾಲೂಕೊಂದರಲ್ಲೇ 3500 ಕ್ಕೂ ಹೆಚ್ಚು ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಇವರ್ಯಾರಿಗೂ ಕಳೆದ ಒಂದೂವರೆ ತಿಂಗಳಿಂದ ಸಂಬಳ ಪಾವತಿ ಆಗಿಲ್ಲ. ಚಿಕ್ಕೋಡಿ ತಾಲೂಕಿನ ಇಟ್ನಾಳ, ಉಮರಾಣಿ, ಬಂಬಲವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಳ್ಳ ಹೂಳೆತ್ತುವುದು ಸೇರಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಆದ್ರೆ, ಸಂಬಳವೇ ಇಲ್ಲದೇ ಪರದಾಡುವ ಸ್ಥಿತಿ ಕಾರ್ಮಿಕರದ್ದಾಗಿದೆ.
ಇದನ್ನೂ ಓದಿ:ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸಿಗದ ಸಂಬಳ; ಒಟ್ಟು 2 ಕೋಟಿ 77 ಲಕ್ಷ ರೂಪಾಯಿ ಬಾಕಿ
ಇಟ್ನಾಳ ಗ್ರಾಮದ ರೈತ ಸಿದ್ರಾಮ ಚೌಗುಲಾ ಎಂಬಾತ ತನ್ನ ನಾಲ್ಕು ಎಕರೆ ಗದ್ದೆಯಲ್ಲಿ ಮೆಕ್ಕೆಜೋಳ, ಕಬ್ಬು, ಶೇಂಗಾ ಬಿತ್ತನೆ ಮಾಡಿದ್ದರು. ಆದ್ರೆ, ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ಸಂಪೂರ್ಣ ಹಾನಿಯಾಗಿ ಕೆಲಸವಿಲ್ಲದೇ ಅನಿವಾರ್ಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಬಂದಿದ್ದ. ಈಗ ಸಂಬಳ ಆಗದ ಹಿನ್ನೆಲೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸಿದ್ರಾಮ ಚೌಗುಲಾ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.
ಇನ್ನು ಜಮೀನು ಇದ್ದು ಬೆಳೆಹಾನಿಯಾಗಿ ಬೇರೆ ವಿಧಿ ಇಲ್ಲದೇ ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವ ಅನ್ನದಾತರ ಸಂಕಷ್ಟ ಹೇಳತೀರಾಗಿದೆ. ಇತ್ತ ಜಮೀನು ಇಲ್ಲದ ಕೃಷಿ ಕಾರ್ಮಿಕರು ಸಹ ಉದ್ಯೋಗ ಖಾತ್ರಿ ಕೆಲಸವನ್ನೇ ನಂಬಿಕೊಂಡಿದ್ದಾರೆ. ಬೇರೆಯವರ ಹೊಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕೃಷಿ ಕಾರ್ಮಿಕರಿಗೂ ಉದ್ಯೋಗ ಖಾತ್ರಿ ಯೋಜನೆಯೇ ಆಸರೆಯಾಗಿತ್ತು. ಈ ಕುರಿತು ರೈತ ಮಹಿಳೆ ಗಂಗವ್ವಾ ಮಾತನಾಡಿ ‘ಬರಗಾಲ ಹಿನ್ನೆಲೆ ಬೆಳೆ ಹಾನಿಯಾಗಿ ಹೊಲದಲ್ಲಿ ಯಾರೂ ಕೆಲಸಕ್ಕೆ ಕರೆಯುತ್ತಿಲ್ಲ. ಹೀಗಾಗಿ ಉದ್ಯೋಗ ಖಾತ್ರಿಯಡಿ ಕೆಲಸಕ್ಕೆ ಬರುತ್ತಿದ್ದೇವೆ ಆದ್ರೆ, ಕಳೆದ ಒಂದೂವರೆ ತಿಂಗಳಿಂದ ಸಂಬಳವಾಗಿಲ್ಲ ಎಂದರು.
ಇದನ್ನೂ ಓದಿ:ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಗ್ರಾ. ಪಂ. ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಇನ್ನು ಕೇವಲ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಸಂಬಳ ಪಾವತಿ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದೇನೇ ಇರಲಿ ಭೀಕರ ಬರದಿಂದ ಕಂಗೆಟ್ಟ ರೈತರಿಗೆ ಉದ್ಯೋಗ ಖಾತ್ರಿ ಆಸರೆಯಾಗಿದೆ ಅಂದುಕೊಂಡ್ರೆ, ಇಲ್ಲಿಯೂ ಸಂಬಳ ಆಗಿಲ್ಲ ಎಂದು ಅನ್ನದಾತ ಅಳಲು ತೋಡಿಕೊಳ್ಳುತ್ತಿದ್ದು ಆದಷ್ಟು ಬೇಗ ಸಂಬಳ ನೀಡಿ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎಂದು ರಾಜಕಾರಣ ಮಾಡದೇ ರೈತರ ನೆರವಿಗೆ ಬನ್ನಿ ಎಂದು ಅನ್ನದಾತ ಆಗ್ರಹಿಸಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ