AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸಿಗದ ಸಂಬಳ; ಒಟ್ಟು 2 ಕೋಟಿ 77 ಲಕ್ಷ ರೂಪಾಯಿ ಬಾಕಿ

ಕೂಲಿ ಹಣವನ್ನು ನಂಬಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಹಣ ಬಾರದಿರುವುದರಿಂದಾಗಿ ಅವರ ಬದುಕಿನ ಮೇಲೆ ಬಾರಿ ಹೊಡೆತ ಬಿದ್ದಿದೆ. ಸಕಾಲಕ್ಕೆ ಕೂಲಿಯ ಮೊತ್ತ ಸಿಗದೆ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರು ದಿಕ್ಕೆಟ್ಟು ಕೂರುವಂತಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸಿಗದ ಸಂಬಳ; ಒಟ್ಟು 2 ಕೋಟಿ 77 ಲಕ್ಷ ರೂಪಾಯಿ ಬಾಕಿ
ಉದ್ಯೋಗ ಖಾತ್ರಿ ಯೋಜನೆಯಡಿ
Follow us
TV9 Web
| Updated By: preethi shettigar

Updated on: Aug 30, 2021 | 9:47 AM

ಬೀದರ್: ಉದ್ಯೋಗ ಖಾತ್ರಿ ಯೋಜನೆ ಇದು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದು. ಈ ಯೋಜನೆಯಿಂದ ಸಾವಿರಾರು ಬಡವರು ಕೆಲಸ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲವರಿಗೆ ಉದ್ಯೋಗ ಖಾತ್ರಿ ಯೋಜನೆ ಲಾಭದ ಬದಲು ಶಾಪವಾಗಿ ಪರಿಣಮಿಸಿದೆ. ಬೀದರ್ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿದೆ ನಿಜ. ಆದರೆ ಕಷ್ಟಪಟ್ಟು ದುಡಿದ ಹಣಕ್ಕಾಗಿ ಪಂಚಾಯತಿಗೆ ಕೂಲಿ ಕಾರ್ಮಿಕರು ಅಲೆದಾಡುವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಬೀದರ್ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮಾಡುವುದು ಕೂಲಿ, ಬೇಡುವುದು ಕೂಲಿ ಎಂಬಂತಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಾಕಷ್ಟು ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವೂ ಆಗಿದೆ. ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ಕೆಲಸ ವಿಲ್ಲದೆ ಹಲವು ಜನರು ಉದ್ಯೋಗ ಖಾತ್ರಿ ಕಾಮಗಾರಿಗೆ ಹೋಗುತ್ತಿದ್ದಾರೆ.

ಕುಟುಂಬ ನಿರ್ವಹಣೆಗೆ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದು ಕಂತು ರೂಪದಲ್ಲಿ ಪಾವತಿ ಮಾಡುತ್ತಿರುವ ಅದೆಷ್ಟೋ ಮಂದಿ ಲಾಕ್‌ಡೌನ್​ನಿಂದ ಇದ್ದ ಕೆಲಸ, ಕಾರ್ಯ ಕಳೆದುಕೊಂಡು ಉದ್ಯೋಗ ಖಾತ್ರಿಗೆ ಹೋಗುತ್ತಿದ್ದಾರೆ. ಆದರೆ, ಸಕಾಲಕ್ಕೆ ಕೂಲಿ ಹಣ ಬಿಡುಗಡೆಯಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಯೋಜನೆಯ ಸಾಮಗ್ರಿಗಳ ವೆಚ್ಚ ಸಹ ಪಾವತಿಯಾಗದೇ ತಿಂಗಳುಗಳೇ ಉರುಳಿವೆ. ಕೂಲಿ ಇಲ್ಲದೇ ಉದ್ಯೋಗ ಮಾಡುವುದು ಹೇಗೆ ಎಂದು ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಜತೆಗೆ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಬಡವರು ಹೊಟ್ಟೆ ತುಂಬಿಸಿಕೊಳ್ಳುವುದು ಕೂಡ ಒಂದು ಸವಾಲಾಗಿದೆ. ಇದರ ನಡುವೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಹಣ ಬಾರದೆ ಇರುವುದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಿದವರು ಹಿಡಿಶಾಪ ಹಾಕುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ 185 ಗ್ರಾಮ ಪಂಚಾಯತಿ ಬರುತ್ತಿದ್ದು, ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಾವಿರಾರು ಕೂಲಿ ಕಾರ್ಮಿಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಕೆಲಸ ಕೇಳಿಕೊಂಡು ಅದೇಷ್ಟೇ ಜನರು ಬಂದರು ಕೂಡಾ ಕೆಲಸ ಇಲ್ಲ ಅಂತಾ ಹೇಳದಂತೆ ಸರಕಾರ ಆದೇಶ ಮಾಡಿದ್ದರಿಂದ ಎಲ್ಲರಿಗೂ ಕೆಲಸ ಕೊಡಲಾಗಿದೆ. ಇನ್ನೂ ಜಿಲ್ಲೆಯಲ್ಲಿ 1.59 ಲಕ್ಷ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳಿದ್ದು, 3.17 ಲಕ್ಷ ಕೂಲಿ ಕಾರರಿದ್ದಾರೆ. ಉದ್ಯೋಗವಿಲ್ಲದ ಪರಿಸ್ಥಿತಿ ನಿರ್ಮಾಣವಾದಾಗ, ಕೈಹಿಡಿದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಾಕಷ್ಟು ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವೂ ಆಗಿದೆ. ಈಗ ಕೂಲಿ ಕಾರ್ಮಿಕರಿಗೆ ತಮ್ಮ ದುಡುಮೆಯ ಹಣ ಬಿಡುಗಡೆ ಆಗದಿರುವುದು ಯೋಜನೆಯನ್ನೂ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕೆಲಸ ಮಾಡಿ ತಿಂಗಳಾದರೂ ಕೂಲಿ ಮೊತ್ತ ಪಾವತಿಯಾಗಿಲ್ಲ. ಕುಟುಂಬ ನಿರ್ವಹಣೆ, ಸಂಘ, ಸಂಸ್ಥೆ ಹಣ ಮರುಪಾವತಿಗೆ ಅವರಿವರ ಬಳಿ ಕೈಗಡ ಹಣ ತಂದು ಕಟ್ಟುತ್ತಿದ್ದೇವೆ. ವಾರಕ್ಕೊಮ್ಮೆಯಾದರೂ ಕೂಲಿ ಹಣ ಸಿಕ್ಕರೆ ಅನುಕೂಲವಾಗುತ್ತದೆ. ಹಣ ಕೇಳುವುದಕ್ಕೆ ಪಂಚಾಯಿತಿಗೆ ಅಲೆಯಬೇಕು. ಅವರು ಯಾವಾಗ ಅಂತ ಹೇಳಲ್ಲ. ಕೇಳಿದಾಗಲೆಲ್ಲ ಬರುತ್ತೇ ಹೋಗಿ ಎಂದು ಹೇಳುತ್ತಾರೆ ಎಂದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಚಿನ್ನಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ವಿಚಾರದ ಬಗ್ಗೆ ಸಿಇಓ ಜಹೀರಾ ನಸೀಮ್ ಅವರನ್ನು ಕೇಳಿದರೆ ಬೀದರ್ ಜಿಲ್ಲೆಯಲ್ಲಿ ಆಗಷ್ಟ್ ತಿಂಗಳ ಅಂಕಿ ಅಂಶದಂತೆ ಒಟ್ಟಾರೆ 2.77 ಕೋಟಿ ರೂಪಾಯಿ ಕೂಲಿ ಹಣ ಪಾವತಿಯಾಗಬೇಕಿದೆ. ಹಣ ಬಂದ ತಕ್ಷಣ ಕೊಡುತ್ತೇವೆ ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆಗೆ ಜನಜೀವನ ತತ್ತರಿಸಿರುವ ಸಮಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರ ಜನರಿಗೆ ಉದ್ಯೋಗ ಖಾತ್ರಿ ಕೆಲಸ ನೀಡುವ ಮೂಲಕ ಬಡವರ ನೆರವಿಗೆ ಮುಂದಾಗಿತ್ತು. ಅದು ಖುಷಿಯ ವಿಚಾರವೂ ಆಗಿದೆ. ಆದರೆ ಅದೇ ಕೂಲಿ ಹಣವನ್ನು ನಂಬಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಹಣ ಬಾರದಿರುವುದರಿಂದಾಗಿ ಅವರ ಬದುಕಿನ ಮೇಲೆ ಬಾರಿ ಹೊಡೆತ ಬಿದ್ದಿದೆ. ಸಕಾಲಕ್ಕೆ ಕೂಲಿಯ ಮೊತ್ತ ಸಿಗದೆ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರು ದಿಕ್ಕೆಟ್ಟು ಕೂರುವಂತಾಗಿದ್ದರೆ, ಯೋಜನೆಯ ಗುರಿ ತಲುಪಲು ಸಾಧ್ಯವಾಗದೆ ಅಧಿಕಾರಿಗಳು ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ನಿತ್ಯವೂ ಗ್ರಾಮ ಪಂಚಾಯಿತಿಗಳಿಗೆ ಆಗಮಿಸುವ ಕಾರ್ಮಿಕರು ತಮ್ಮ ಕೂಲಿ ಹಣ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುವಾಗ ಉತ್ತರಿಸಲು ಆಗದ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನುವುದು ಮಾತ್ರ ನಿಜ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಲ್ಲದ ಅಕ್ರಮ; ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿರುದ್ಧ ಆರೋಪ

ಉದ್ಯೋಗ ಖಾತ್ರಿ ಯೋಜನೆ ಹೆಸರಿನಲ್ಲಿ ಅಕ್ರಮ; ಕಾರ್ಮಿಕರ ಬದಲು ಜೆಸಿಬಿ ಬಳಸಿ ಕಾಮಗಾರಿ ಮಾಡಿಸಿದ ಆರೋಪ