AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಲ್ಲದ ಅಕ್ರಮ; ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿರುದ್ಧ ಆರೋಪ

ಜಾಬ್​ ಕಾರ್ಡ್​ದಾರರಿಗೆ ಈ ರೀತಿ ಗ್ರಾಮ ಪಂಚಾಯತಿ ಅಧಿಕಾರಿಗಳು ಭಯ ಪಡಿಸಿ ಹಣ ವಸೂಲಿ ಮಾಡುವ ಕೆಲಸ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಹಾಗಾಗಿ ಮಹತ್ವಪೂರ್ಣವಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಲ್ಲೋ ಒಂದು ಕಡೆ ಹಳ್ಳ ಹಿಡಿಯುತ್ತಿರುವುದು ಕಂಡು ಬಂದಿದೆ.

ಕೋಲಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಲ್ಲದ ಅಕ್ರಮ; ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿರುದ್ಧ ಆರೋಪ
ಉದ್ಯೋಗ ಖಾತ್ರಿ ಯೋಜನೆಯಲ್ಲಿ (ಸಂಗ್ರಹ ಚಿತ್ರ)
TV9 Web
| Updated By: preethi shettigar|

Updated on: Jul 30, 2021 | 4:42 PM

Share

ಕೋಲಾರ: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಮಹಾತ್ಮಾ ಗಾಂಧಿ ಗ್ರಾಮೀಣ ರಾಷ್ಟಿಯ ಉದ್ಯೋಗ ಖಾತ್ರಿ ಯೋಜನೆ (NAREGA) ಜಾರಿಗೊಳಿಸಿದೆ. ಆದರೆ, ಯೋಜನೆ ಹಣ ಮಾತ್ರ ಪರರ ಪಾಲಾಗುತ್ತಿರುವುದು ಕಂಡು ಬಂದಿದೆ. ನರೇಗಾ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಅದರಂತೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ದಿನಗೂಲಿಯನ್ನು ನೀಡಲಾಗುತ್ತಿದೆ. ಆದರೆ ಕೋಲಾರ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಕಾಮಗಾರಿಗಳ ನಿರ್ವಹಣೆ ಮಾಡುತ್ತಿರುವುದು ಕಂಡುಬಂದಿದೆ. ಇದು ಸಹಜವಾಗಿ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೆರೆ, ಕಾಲುವೆ, ಕಲ್ಯಾಣಿಗಳಲ್ಲಿ ಹೂಳೆತ್ತುವುದು, ಗಿಡ ನೆಡುವುದು ಸೇರಿದಂತೆ ಹಲವಾರು ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಆದರೆ, ಕಾಮಗಾರಿಗಳನ್ನು ಜನರಿಂದಲೇ ಮಾಡಬೇಕೆಂಬ ನಿಯಮವಿದ್ದರೂ, ಬಹುತೇಕ ಕಾಮಗಾರಿಗಳನ್ನು ಯಂತ್ರಗಳಿಂದ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಗ್ರಾಮ ಪಂಚಾಯತಿ ಅಧಿಕಾರಿಗಳಿಂದಲೇ ಕಾಮಗಾರಿ ಉಸ್ತುವಾರಿ! ಸಾರ್ವಜನಿಕ ಹಿತಾಸಕ್ತಿಯಿಂದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಸಮುದಾಯ ಕಾಮಗಾರಿಗಳು ಅಥವಾ ಗ್ರಾಮ ಪಂಚಾಯತಿ ಸಭೆಗಳಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರನ್ನು ಬಳಸಿಕೊಳ್ಳಬಹುದಾಗಿದೆ. ಅದರಂತೆ ಕಾಮಗಾರಿ ನಿರ್ವಹಣೆ ಹಾಗೂ ಉಸ್ತುವಾರಿಗಾಗಿಯೇ ಗ್ರಾಮ ಪಂಚಾಯತಿಗಳಲ್ಲಿ ಜನರನ್ನು ನೇಮಿಸಿಕೊಳ್ಳಬಹುದಾಗಿದೆ. ಆದರೆ ಗ್ರಾಮ ಪಂಚಾಯತಿಗಳಲ್ಲಿನ ಅಧಿಕಾರಿಗಳು, ನರೇಗಾ ಯೋಜನೆಯ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದು, ರಾತ್ರೋ ರಾತ್ರಿ ಯಂತ್ರಗಳಿಂದ ಕಾಮಗಾರಿ ಮಾಡಿಸಿದ ಬಳಿಕ ಜಾಬ್ ಕಾರ್ಡ್​ದಾರರ ಬಳಿಗೆ ಹೋಗಿ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ನರೇಗಾ ಕಾಮಗಾರಿ ಹಣದ ದುರುಪಯೋಗ ಗ್ರಾಮದಲ್ಲಿರುವ ಜಾಬ್ ಕಾರ್ಡ್​ಗಳನ್ನು ಪಡೆದುಕೊಳ್ಳುವ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಯಂತ್ರಗಳ ಮೂಲಕ ಕಾಮಗಾರಿಯನ್ನು ನಡೆಸುತ್ತಾರೆ. ಇಲ್ಲವೆ ಬೇರೆಡೆಯಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಿ, ಇಂತಹ ಜಾಬ್ ಕಾರ್ಡ್​ನವರು ಕೆಲಸಕ್ಕೆ ಹಾಜರಾಗಿದ್ದರೆಂದು ಆನ್‌ಲೈನ್‌ನಲ್ಲಿ ದಾಖಲಿಸುತ್ತಾರೆ. ಅದರಂತೆ ಜಾಬ್​ ಕಾರ್ಡ್​ದಾರರು ಎಷ್ಟು ದಿನ ಕೆಲಸ ಮಾಡಿದ್ದಾರೆ. ಅಷ್ಟು ದಿನಗಳ ಕೂಲಿಯನ್ನು ನೇರವಾಗಿ ಫಲಾನುಭವಿಯ ಖಾತೆಗೆ ಹಾಕಲಾಗುತ್ತದೆ. ಖಾತೆಗೆ ಹಣ ಹಾಕಿದ ಬಳಿಕ ಮನೆಗಳ ಬಳಿಗೆ ಬರುವ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಫಲಾನುಭವಿಗಳ ಎಟಿಎಂ ಕಾರ್ಡ್ ಪಡೆದುಕೊಂಡು ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ.

ಯಾವುದೇ ಕಾಮಗಾರಿ ನಡೆಸಿದಾಗ ಗುತ್ತಿಗೆದಾರರು ಹೋಗಿ ಫಲಾನುಭವಿಗಳನ್ನು ಹಣ ಡ್ರಾ ಮಾಡಿಕೊಡುವಂತೆ ಕೇಳಿದಾಗ, ಫಸಲ್ ಭೀಮಾ ಯೋಜನೆ ಹಣ ಬಂದಿದೆ. ಹಾಲು ಹಾಕಿದ ಹಣ ಬಂದಿದೆ ಎಂದು ಹೇಳಿ ಜಾಬ್ ಕಾರ್ಡ್​ದಾರರು ಹಣ ಡ್ರಾ ಮಾಡಿಕೊಡಲು ನಿರಾಕರಿಸುತ್ತಾರೆ. ಆದರೆ, ಗ್ರಾಮ ಪಂಚಾಯತಿ ಅಧಿಕಾರಿಗಳು ಹೋಗಿ ಹಣ ಡ್ರಾ ಮಾಡಿಕೊಡುವಂತೆ ಕೇಳಿದಾಗ ಗ್ರಾಮ ಪಂಚಾಯತಿಗಳಲ್ಲಿ ಏನಾದರೂ ಕೆಲಸಕ್ಕೆ ಹೋದಾಗ ತೊಂದರೆ ಮಾಡುತ್ತಾರೆಂಬ ಭಯದಿಂದಾದರೂ ಹಣ ಡ್ರಾ ಮಾಡಿಕೊಡುತ್ತಾರೆ ಎಂದು ಸಮಜಾಯಿಷಿ ನೀಡುವ ಗ್ರಾಮ ಪಂಚಾಯತಿ ಕಾರ್ಯದರ್ಶಿಯೊಬ್ಬರು, ಫಲಾನುಭವಿಗಳಿಗೆ ಖಾತೆಗೆ ಹೋದ ಹಣ ನೀವ್ಯಾಕೆ ವಾಪಸ್ ಕೇಳುತ್ತೀರಾ? ಕೆಲಸ ಮಾಡದೆ ಅವರ ಖಾತೆಗೆ ಯಾಕೆ ಹಣ ಹಾಕಿದಿರಿ? ಯಂತ್ರಗಳಿಂದ ಕೆಲಸ ಮಾಡಿಸಿದ್ದೀರಾ ಎಂದು ಟಿವಿ9 ಡಿಜಿಟಲ್​ ವರದಿಗಾರರು ಪ್ರಶ್ನಿಸಿದಾಗ ಉತ್ತರಿಸಲು ಹಿಂಜರಿದಿದ್ದಾರೆ.

ಜಾಬ್​ ಕಾರ್ಡ್​ದಾರರಿಗೆ ಈ ರೀತಿ ಗ್ರಾಮ ಪಂಚಾಯತಿ ಅಧಿಕಾರಿಗಳು ಭಯ ಪಡಿಸಿ ಹಣ ವಸೂಲಿ ಮಾಡುವ ಕೆಲಸ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಹಾಗಾಗಿ ಮಹತ್ವಪೂರ್ಣವಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಲ್ಲೋ ಒಂದು ಕಡೆ ಹಳ್ಳ ಹಿಡಿಯುತ್ತಿರುವುದು ಕಂಡು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣ ಪಡೆಯಲು ಮುಂದಾಗುವುದು ತಪ್ಪಾಗುತ್ತದೆ. ಜತೆಗೆ ಕೆಲಸಕ್ಕೆ ಬರದವರ ಖಾತೆಗೆ ಹಣ ಜಮೆ ಮಾಡುವುದು ತಪ್ಪು. ಅಂಥ ಪ್ರಕರಣಗಳ ಕುರಿತು ಕೆಲವೆಡೆ ದೂರು ಬಂದಿದ್ದು, ಗುಪ್ತ ತನಿಖೆ ನಡೆಸಿ ತಪ್ಪು ಮಾಡಿರುವುದು ಸಾಬೀತಾದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವಿಶೇಷ ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ 150ಕ್ಕೂ ಹೆಚ್ಚು ಕೃಷಿ ಹೊಂಡಗಳ ನಿರ್ಮಾಣ; ಧಾರವಾಡ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ

ಸದುದ್ದೇಶದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಆತಂಕದಿಂದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಆತ್ಮಹತ್ಯೆ