ಬೆಳಗಾವಿ, ಅಕ್ಟೋಬರ್ 26: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಕೊರಳಲ್ಲಿ ಹುಲಿ ಉಗುರಿನ (Tiger Claw) ಲಾಕೆಟ್ ಪತ್ತೆಯಾದ ಕೇಸ್ ಬೆನ್ನಲ್ಲೇ ರಾಜ್ಯಾದ್ಯಂತ ಬೇಟೆ ಜೋರಾಗಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿ ಬಿಲ್ಡಪ್ ಕೊಡುತ್ತಿದ್ದವರಿಗೆ ಅರಣ್ಯ ಇಲಾಖೆ ಶಾಕ್ ಕೊಟ್ಟಿದೆ. ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಮನೆ ಮೇಲೆ ಅರಣ್ಯಾಧಿಕಾರಿಗಳು ಭೇಟಿ ಮಾಡಿ, ಹುಲಿ ಉಗುರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ಗೂ ಸಂಕಷ್ಟ ಶುರುವಾಗಿದೆ.
ಮೃಣಾಲ್ ಹುಲಿ ಉಗುರು ಇರುವ ಲಾಕೆಟ್ ಧರಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮದುವೆ, ಮತ್ತಿತರೆ ಸಮಾರಂಭಗಳಲ್ಲಿ ಲಾಕೆಟ್ ಧರಿಸಿದ್ದ ಫೋಟೋ ವೈರಲ್ ಆಗಿದೆ. ಹುಲಿಯ 1 ಉಗುರು ಇರುವ ಲಾಕೆಟ್ ಧರಿಸುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದ್ದರೂ ಬೆಳಗಾವಿ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ. ಈ ಕುರಿತಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪುತ್ರ ಮೃಣಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಧರಿಸಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಲಕ್ಷ್ಮೀ ಹೆಬ್ಬಾಳಕರ್ ಅಕ್ಕನ ಮಗಳನ್ನು ಮದುವೆಯಾಗಿರುವ ರಜತ್ ಉಳ್ಳಾಗಡ್ಡಿಮಠ ಧರಿಸಿರುವ ಲಾಕೆಟ್ ಬಗ್ಗೆ ಚರ್ಚೆ ಶುರುವಾಗಿದೆ. ಮದುವೆ ಸಮಯದಲ್ಲಿ ಫೋಟೋ ಶೂಟ್ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಫೋಟೋ ಈಗ ವೈರಲ್ ಆಗಿದೆ.
ಇಂದು ವಿಜಯಪುರದಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಶಾಶ್ವತ ಗೌಡ ಪಾಟೀಲ್ ಧರಿಸುತ್ತಿದ್ದ ಹುಲಿ ಉಗುರಿನ ಲಾಕೆಟ್ನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಅದನ್ನು ಪರೀಕ್ಷೆಗೆ ಕಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ನಿವಾಸದಲ್ಲಿ ಶೋಧ: ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಈ ಕುರಿತ ಮಾತನಾಡಿರುವ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್, ನಾನು ನಿನ್ನೆಯೇ ನಮ್ಮ ಬಳಿಯ ಉಗುರು ನಕಲಿ ಎಂದು ಹೇಳಿದ್ದೇನೆ. ನನ್ನ ಪುತ್ರ ಹಾಕಿಕೊಂಡಿದ್ದು ನಕಲು ಹುಲಿ ಉಗುರು. ಈ ಕುರಿತು ನಾನೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ತನಿಖೆಗೆ ನಾವು ಸಹಕಾರ ನೀಡುತ್ತೇವೆ. ವಾಸ್ತು ಕಾರಣದಿಂದ ಕೆಲ ವರ್ಷಗಳ ಹಿಂದೆ ನಕಲಿ ಹುಲಿ ಉಗುರು ಖರೀದಿ ಮಾಡಿದ್ದೆ. ನಾವೇ ಹುಲಿ ಇದ್ದೇವೆ ನಮಗೆ ಯಾಕೆ ಹುಲಿ ಎಂದಿದ್ದಾರೆ.
ಆರ್ಯವರ್ಧನ್ ಬಳಿಯೂ ಹುಲಿ ಉಗುರು?
ಮತ್ತೊಂದೆಡೆ ಆರ್ಯವರ್ಧನ್ ಗುರೂಜಿ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಆರೋಪ ಕೇಳಿಬಂದಿದೆ. ಹೀಗಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್ಯವರ್ಧನ್ ಗುರೂಜಿ ನಿವಾಸದಲ್ಲೂ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದು, ಚಿನ್ನದಿಂದ ಮಾಡಿದ್ದ ಲಾಕೆಟ್ನ್ನು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಚಿನ್ನದ ಅಂಗಡಿಗೆ ತೆಗೆದುಕೊಂಡು ಹೋಗಿರುವ ಅರಣ್ಯಾಧಿಕಾರಿಗಳು, ಚಿನ್ನದ ಲಾಕೆಟ್ ಒಳಗೆ ಇರುವ ಹುಲಿ ಉಗುರನ್ನು ಪರಿಶೀಲನೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.