ಬೆಳಗಾವಿ ಜಿಲ್ಲೆಯಲ್ಲಿ ಬಳಕೆಯಾಗದ ಶಾಸಕರ ಅನುದಾನ; ಸಾರ್ವಜನಿಕರಿಂದ ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 11, 2023 | 7:46 AM

ಜಿಲ್ಲೆಯಲ್ಲಿ 18ಜನ ಶಾಸಕರು, 4 ಜನ ವಿಧಾನಪರಿಷತ್ ಸದಸ್ಯರು ಸೇರಿ 22ಜನಪ್ರತಿನಿಧಿಗಳಿದ್ದು, ದೊಡ್ಡ ಪ್ರಮಾಣದಲ್ಲಿ ಅನುದಾನ ಹರಿದು ಬರುತ್ತದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಅದನ್ನ ಬಳಕೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಬಳಕೆಯಾಗದ ಶಾಸಕರ ಅನುದಾನ; ಸಾರ್ವಜನಿಕರಿಂದ ಆಕ್ರೋಶ
ಬೆಳಗಾವಿ ಸುವರ್ಣ ಸೌಧ
Follow us on

ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಶಾಸಕರು ಹಾಗೂ 4 ವಿಧಾನ ಪರಿಷತ್ ಸದಸ್ಯರು ಇದ್ದು, ಇವರ ಹೆಸರಿನಲ್ಲಿ ಪ್ರತಿ ವರ್ಷ ಸಾಕಷ್ಟು ಅನುದಾನ ಬರುತ್ತಿದೆ. ಆದರೆ ಅದು ಬಳಕೆಯಾಗುತ್ತಿಲ್ಲದಿರುವುದು ಒಂದು ಕಡೆಯಾದರೆ. ಇನ್ನೊಂದು ಕಡೆ ಇರುವ ಅನುದಾನವನ್ನ ಸರಿಯಾಗಿ ಸದ್ಬಳಕೆ ಮಾಡದೇ ಇರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಡುಗಡೆಯಾದ ಅನುದಾನದಲ್ಲಿ ಆಗಬೇಕಿದ್ದ ಕಾಮಗಾರಿಗಳು ಯಾವುದು ಪೂರ್ಣಗೊಂಡಿಲ್ಲ. ಸಾಕಷ್ಟು ಹಣವಿದ್ದರೂ ಜನಪ್ರತಿನಿಧಿಗಳು ಮಾತ್ರ ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲದಿರುವುದು ಜನರ ಆಕ್ರೋಶವಾಗಿದೆ. ಸಧ್ಯದಲ್ಲೇ ಚುನಾವಣೆ ಕೂಡ ಬರುತ್ತಿದ್ದು ಅದರ ಮೇಲೆ ಸಾಕಷ್ಟು ಪ್ರಭಾವ ಬೀರುವ ಲಕ್ಷಣವಿದೆ.

ಮೊದಲು ಯಾವ ಕ್ಷೇತ್ರದಲ್ಲಿ ಯಾವ ಶಾಸಕರಿದ್ದಾರೆ ನೋಡುವುದಾದರೆ

ಬೆಳಗಾವಿ ಉತ್ತರ ಕ್ಷೇತ್ರ ಅನಿಲ್ ಬೆನಕೆ, ದಕ್ಷಿಣ ಕ್ಷೇತ್ರ ಅಭಯ್ ಪಾಟೀಲ್, ಗ್ರಾಮೀಣ ಕ್ಷೇತ್ರ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ ಕ್ಷೇತ್ರ ಅಂಜಲಿ ನಿಂಬಾಳ್ಕರ್, ಕಿತ್ತೂರು ಮಹಾಂತೇಶ್ ದೊಡ್ಡಗೌಡರ, ರಾಮದುರ್ಗ ಮಹಾದೇವಪ್ಪ ಯಾದವಾಡ, ಬೈಲಹೊಂಗಲ ಮಹಾಂತೇಶ್ ಕೌಜಲಗಿ, ಗೋಕಾಕ್ ರಮೇಶ್ ಜಾರಕಿಹೊಳಿ, ಅರಭಾವಿ ಬಾಲಚಂದ್ರ ಜಾರಕಿಹೊಳಿ, ಯಮಕನಮರಡಿ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಗಣೇಶ್ ಹುಕ್ಕೇರಿ, ನಿಪ್ಪಾಣಿ ಶಶಿಕಲಾ ಜೊಲ್ಲೆ, ರಾಯಬಾಗ ದುರ್ಯೋಧನ ಐಹೊಳೆ, ಕುಡಚಿ ಪಿ.ರಾಜೀವ್, ಕಾಗವಾಡ ಶ್ರೀಮಂತ್ ಪಾಟೀಲ್, ಅಥಣಿ ಮಹೇಶ್ ಕುಮಟಳ್ಳಿ, ಎರಡು ಕ್ಷೇತ್ರಗಳಾದ ಹುಕ್ಕೇರಿ ಮತ್ತು‌ ಸವದತ್ತಿ ಶಾಸಕರು ನಿಧನ ಹೊಂದಿದ್ದಾರೆ. ಇತ್ತ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ, ಹನುಮಂತ ನಿರಾಣಿ ಹೀಗೆ 22ಜನಪ್ರತಿನಿಧಿಗಳಿದ್ದು ಇವರ ಹೆಸರಲ್ಲಿ ಪ್ರತಿ ವರ್ಷ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತಿದ್ದರೂ ಕ್ಷೇತ್ರದ ಅಭಿವೃದ್ಧಿ ಕಾರ್ಯ ಆಗದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಡುಗಡೆ ಆದ ಅನುದಾನದಲ್ಲಿ ಅಲ್ಪ ಕಾಮಗಾರಿ, ಪೂರ್ಣ ಆಸಕ್ತಿ ತೋರದ ಶಾಸಕರು

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಶಾಸಕರ ನಿಧಿ)ಗೆ ಬಿಡುಗಡೆ ಮಾಡಿದ ಕೋಟ್ಯಂತರ ರೂಪಾಯಿ ವೆಚ್ಚವಾಗದೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಕೊಳೆಯುತ್ತಿದೆ. ಅಲ್ಪ ಪ್ರಮಾಣ ಕಾಮಗಾರಿಗಳಷ್ಟೇ ಪುರ್ಣಗೊಂಡಿವೆ. 2021-22ನೇ ಸಾಲಿನ ಅವಧಿಯಲ್ಲಿ ಪ್ರತಿ ವಿಧಾನಸಭಾ ಮತ್ತು ವಿಧಾನಪರಿಷತ್ ಕ್ಷೇತ್ರಕ್ಕೆ ತಲಾ 1.50 ಕೋಟಿ ರೂಪಾಯಿಯಂತೆ ಒಟ್ಟು 33 ಕೋಟಿ ರೂಪಾಯಿ ಶಾಸಕರ ನಿಧಿಯ ಅನುದಾನ ನೇರವಾಗಿ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಜನಪ್ರತಿನಿಧಿಗಳು ನಿಗದಿತ ಸಮಯದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವುದು, ಶಾಸಕರು ಶಿಫಾರಸ್ಸು ಮಾಡಿದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

156 ಕಾಮಗಾರಿಗಳಿಗೆ ಶಿಪಾರಸ್ಸು, 58 ಕಾಮಗಾರಿಗಳಿಗೆ ಮಾತ್ರ ಆಡಳಿತಾತ್ಮಕ ಮಂಜೂರಾತಿ

ಜಿಲ್ಲೆಯಲ್ಲಿ 18ಜನ ಶಾಸಕರು, 4 ಜನ ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಮುದಾಯ ಭವನ, ದೇವಾಲಯ ನಿರ್ಮಾಣ, ಗ್ರಾಮೀಣ ರಸ್ತೆ, ಚರಂಡಿ, ತುರ್ತು ಕುಡಿಯುವ ನೀರು, ಕ್ರೀಡೆ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಬೀದಿ ದೀಪ, ಗ್ರಂಥಾಲಯ, ಬಸ್ ತಂಗುದಾಣ, ಪ್ರವಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ವಿವಿಧ ಸಾರ್ವಜನಿಕ ಕೆಲಸಗಳಿಗೆ 156 ಕಾಮಗಾರಿಗಳಿಗೆ ಶಿಪಾರಸ್ಸು ಮಾಡಿದ್ದಾರೆ. ಆದರೆ, 58 ಕಾಮಗಾರಿಗಳಿಗೆ ಮಾತ್ರ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಅದರಲ್ಲಿ 19 ಕಾಮಗಾರಿಗಳು ಪೂರ್ಣಗೊಂಡಿದ್ದರೆ 72 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ತಾಂತ್ರೀಕ ಸಮಸ್ಯೆ, ತಪ್ಪಾದ ಕಾಮಗಾರಿ ಇತರೆ ಕಾರಣಗಳಿಂದಾಗಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿಲ್ಲ.

2019 ರಿಂದ 2021ರ ಸಾಲಿನ ನಡುವಿನ ಅವಧಿಯಲ್ಲಿ ಉಂಟಾದ ಅತಿವೃಷ್ಟಿ, ಕೋವಿಡ್-19 ನಿಂದಾಗಿ ಅನುದಾನ ಕೊರತೆ, ಶಾಸಕ ನಿರಾಸಕ್ತಿಯಿಂದಾಗಿ ಕಾಮಗಾರಿಗಳು ಕೈಗೊಂಡಿರಲಿಲ್ಲ. ಇದೀಗ ಸರ್ಕಾರವು 2021-22ನೇ ಸಾಲಿನ ಅವಧಿಯಲ್ಲಿ ಎಲ್ಲ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ದಿ, ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲಕ್ಕಾಗಿ ಸರ್ಕಾರವು ಶಾಸಕರ ನಿಧಿಗೆ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಆದರೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿನ ಜನರು ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಕಾಮಗಾರಿಗಳ ಬದಲಾಗಿ ದೇವಸ್ಥಾನ ಕಟ್ಟಡ, ದೇವಸ್ಥಾನ ದುರಸ್ತಿ ಕಾಮಗಾರಿಗಳಿಗೆ ಅನುದಾನಕ್ಕೆ ಹೆಚ್ಚಿನ ಅರ್ಜಿ ಸಲ್ಲಿಸುತ್ತಿದ್ದಾರೆ. ಇದಕ್ಕೆ ಅನುದಾನ ಕೊಡಬೇಕು ಅಥವಾ ಬಿಡಬೇಕು ಎಂಬ ಸಂಕಷ್ಟಕ್ಕೆ ಶಾಸಕರು ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್: ಮನೆಯನ್ನೇ ಮಸೀದಿಯಾಗಿ ನಿರ್ಮಿಸಿಕೊಂಡ ಆರೋಪ, ಎಲ್ಲೆಡೆ ಆಕ್ರೋಶ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ, ಕಾಮಗಾರಿ ವಿವರ

ವಿಭಾಗ                                                ಅಂಕಿ ಸಂಖ್ಯೆ
ಶಾಸಕರು, ಎಂಎಲ್‌ಸಿ                         22
ಬಿಡುಗಡೆ ಅನುದಾನ                         33 ಕೋಟಿ ರೂ. ( ಪ್ರತಿ ಕ್ಷೇತ್ರಕ್ಕೆ 1.50 ಕೋಟಿ ರೂ.)
ಬಳಕೆಯಾದ ಅನುದಾನ                    13.51 ಕೋಟಿ ರೂ.
ಖರ್ಚಾಗದೆ ಉಳಿದ ಅನುದಾನ         19.49ಕೋಟಿ ರೂ.
ಒಟ್ಟು ಕಾಮಗಾರಿ                                156
ಪೂರ್ಣಗೊಂಡಿರುವುದು                     30

ಒಟ್ಟಾರೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಬಂದ ಅನುದಾನ ಬಳಕೆ ಆಗದಿರುವುದು ವಿಪರ್ಯಾಸ. ಇನ್ನಾದರೂ ಶಾಸಕರು ತಮಗೆ ಬಿಡುಗಡೆಯಾದ ಅನುದಾನವನ್ನ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ