ಚಿಕ್ಕೋಡಿ, ಸೆಪ್ಟೆಂಬರ್ 10: ನಮ್ಮದು ಜಿಲ್ಲಾ ಮಟ್ಟದ ಹೋರಾಟ, ನಾವು ಯಾವುದೇ ಜನಪ್ರತಿನಿಧಿಗಳಿಗೆ ಬರಲೇಬೇಕೆಂದು ಒತ್ತಾಯ ಮಾಡಿಲ್ಲ. ಹೊಸ ಸರ್ಕಾರ ಬಂದ ಬಳಿಕ ಈಗ ತಾನೇ ಹೋರಾಟ ಶುರು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆಯಾ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿದಾಗ ಅವರು ಬಂದು ಭಾಗವಹಿಸುತ್ತಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji ಹೇಳಿದ್ದಾರೆ. ಜಿಲ್ಲೆಯ ನಿಪ್ಪಾಣಿಯಲ್ಲಿ ಟಿವಿ9ಗೆ ಲಿಂಗಾಯತ ಪಂಚಮಸಾಲಿ ಸಮುದಾಯದ ಆರನೇ ಹಂತದ ಹೋರಾಟಕ್ಕೆ ಹಲವು ನಾಯಕರ ಗೈರಾಗಿದ್ದು, ವೇದಿಕೆಯಲ್ಲಿಯೇ ಶಾಸಕ ವಿನಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಅವರು ಮಾತನಾಡಿರು.
ಬೆಳಗಾವಿ ಜಿಲ್ಲೆ ಜನಪ್ರತಿನಿಧಿಗಳಿಗೆ ಮಾತ್ರ ಹೇಳಿದ್ದೆ, ಹೊರಗಡೆ ಜಿಲ್ಲೆ ಜನಪ್ರತಿನಿಧಿಗಳಿಗೆ ಹೇಳಿರಲಿಲ್ಲ. ಕಳೆದ ಮೂರು ವರ್ಷಗಳ ಕಾಲ ಸತತವಾಗಿ ಬಂದು ಬೆಂಬಲ ಕೊಟ್ಟಿದ್ದಾರೆ. ಹೊಸದಾಗಿ ಶಾಸಕರಾಗಿದ್ದಾರೆ, ತಮ್ಮ ಮತಕ್ಷೇತ್ರದ ಕೆಲಸ ಇರುತ್ತದೆ. ಆಗ ಮಾಜಿ ಇದ್ದರೂ, ಈಗ ಹಾಲಿ ಶಾಸಕರಿದ್ದಾರೆ. ಅವರಿಗೂ ಕೆಲಸದ ಒತ್ತಡ ಇದೆ. ಅವರಿಗೂ ತೊಂದರೆ ಆಗಬಾರದು. ರಾಜ್ಯ ಮಟ್ಟದ ಹೋರಾಟಕ್ಕೆ ಆಹ್ವಾನಿಸುತ್ತೇವೆ ಎಂದು ಸ್ಪಷ್ಟಣೆ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಅಧ್ಯಕ್ಷ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಇತರೆ ನಾಯಕರ ಭಿನ್ನ ಅಭಿಪ್ರಾಯ
2ಎ, 2ಡಿ ಮೀಸಲಾತಿ ವಿಚಾರ ಹೈಕೋರ್ಟ್‌ನಲ್ಲಿ ಇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಮಗೆ ಬೇಕಿರುವುದು 2ಎ ಮೀಸಲಾತಿ, ಕಳೆದ ಬಾರಿ ಸರ್ಕಾರ 2ಡಿ ಕೊಟ್ಟರು, ಅದು ಆಗಲಿಲ್ಲ. ಈಗ 2ಎ ಮೀಸಲಾತಿಗಾಗಿ ಮತ್ತೊಮ್ಮೆ ಒತ್ತಾಯ ಮಾಡುತ್ತಿದ್ದೇವೆ.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಮೀಸಲಾತಿ ನೀಡಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಬಿಜೆಪಿ ಸರ್ಕಾರ ನೀಡಿರುವ 2ಡಿ ಮೀಸಲಾತಿ ನ್ಯಾಯಾಲಯದಲ್ಲಿದೆ, ಕಾಂಗ್ರೆಸ್ ಸರ್ಕಾರ 2ಎ ಮೀಸಲಾತಿ ನೀಡಲಿ. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಸರ್ಕಾರ ವಿರುದ್ಧ ಇನ್ನಷ್ಟು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಜಿಲ್ಲೆ ಜಿಲ್ಲೆಯಲ್ಲಿ ಇಷ್ಟಲಿಂಗ ಪೂಜೆ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಮೀಸಲಾತಿ ನೀಡದಿದ್ದರೆ, ವಿಧಾನಸಭಾದಲ್ಲಿ ನಾವು ಇಷ್ಟಲಿಂಗ ಪೂಜೆ ಮಾಡುತ್ತೇವೆ. ಸರ್ಕಾರ ಪ್ರತಿಭಟನೆಗೆ ಅವಕಾಶ ಕಲ್ಪಿಸದೇ ನಮಗೆ ಮೀಸಲಾತಿ ನೀಡಬೇಕು. ಯಾವುದೇ ಸರ್ಕಾರ ವಿರುದ್ಧ ನಮ್ಮ ಪ್ರತಿಭಟನೆ ಅಲ್ಲ. ಪಂಚಮಸಾಲಿ ಮೀಸಲಾತಿಗೋಸ್ಕರ ನಮ್ಮ ಪ್ರತಿಭಟನೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಜಗದೀಶ್ ಶೆಟ್ಟರ್ ಗೇಮ್ ಪ್ಲ್ಯಾನ್: ಲಿಂಗಾಯತ ನಾಯಕರೇ ಟಾರ್ಗೆಟ್
ರಾಜಕೀಯಕ್ಕಾಗಿ ಕೆಲವು ನಾಯಕರು ಪಂಚಮಸಾಲಿ ಹೋರಾಟ ಬಳಸಿದರಾ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲ ರಾಜಕಾರಣಿಗಳಿಗೂ ಕೆಲವರಿಗೆ ಸ್ವಾರ್ಥ ಇರುತ್ತೆ ಕೆಲವರಿಗೆ ನಿಸ್ವಾರ್ಥ ಇರುತ್ತೆ. ಎಲ್ಲನೂ ಒಂದೇ ರೀತಿ ನೋಡೋದು ಬೇಡ. ಅವರ ಭಾವನೆ ಏನೇ ಇರಲಿ ಸಮಾಜಕ್ಕೋಸ್ಕರ ಬರುತ್ತಾರೆ ಅನ್ನೋದು ಸಮಾಧಾನಕರ ಸಂಗತಿ ಎಂದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸರ್ಕಾರ ಬಂದು ಈಗ ಮೂರು ತಿಂಗಳಾಗಿದೆ. ಕರ್ನಾಟಕದ ಜನತೆಗೆ ಕೊಟ್ಟಂತ ಮಾತು ಉಳಿಸಿಕೊಳ್ಳುವ ಕೆಲಸ ಪ್ರಾರಂಭ ಮಾಡಿದೆ. ಸರ್ಕಾರಕ್ಕೆ ನೂರು ದಿನ ತುಂಬಿದೆ. ನಮ್ಮ ಸರ್ಕಾರ ಯಾವುದೇ ಸಮಾಜಕ್ಕೆ, ಹೋರಾಟಕ್ಕೆ ಸಹಕಾರ ಮುಂಚೆಯಿಂದ ಕೊಡುತ್ತಾ ಬಂದಿದೆ. ಎಲ್ಲಾ ಸಮಾಜಗಳ ಆಗು ಹೋಗುಗಳು, ಕಷ್ಟಗಳನ್ನು ಸರ್ಕಾರ ಈಗಾಗಲೇ ಗಮನಿಸಿದೆ. ಮುಂದೆ ನೋಡೋಣ ಎಂದರು.
ನಾನು ಮೊದಲು ಪಂಚಮಸಾಲಿ ಲಿಂಗಾಯತ ಸಮಾಜದ ಮಗಳು. ಒಂದನೆಯ ಹಂತದ ಹೋರಾಟದಿಂದ ಆರನೇ ಹಂತದ ಹೋರಾಟದವರೆಗೆ ಖಾಯಂ ಆಗಿ ಸಾಕ್ಷಿಯಾಗಿದ್ದೇನೆ. ನಾನು ಸಹ ಸಮಾಜದ ವಿಷಯ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Sun, 10 September 23