ಬೆಳಗಾವಿ ನಗರದಲ್ಲಿ ನೀರಿಗಾಗಿ ಮುಂದುವರಿದ ಹಾಹಾಕಾರ; 20 ದಿನದಿಂದ ಕುಡಿಯುವ ನೀರು ಸಿಗದೆ ಜನರ ಪರದಾಟ
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಬೇಕೇ ಬೇಕು ನೀರು ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ: ನಗರದಲ್ಲಿ ನೀರಿಗಾಗಿ (Water) ಹಾಹಾಕಾರ ಮುಂದುವರಿದಿದೆ. 20 ದಿನದಿಂದ ಕುಡಿಯುವ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೆ ಆಗ್ರಹಿಸಿ ಇಂದು ಮಹಿಳೆಯರು ರಸ್ತೆ ತಡೆದು ಧರಣಿ (Protest) ನಡೆಸಿದ್ದಾರೆ. ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಬೇಕೇ ಬೇಕು ನೀರು ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಜಲಾಶಯಗಳಲ್ಲಿ ನೀರು ಸಂಗ್ರಹ ಇದ್ದರೂ ಸಮರ್ಪಕ ನೀರು ಪೂರೈಕೆ ಮಾಡದಿದ್ದಕ್ಕೆ ಗುತ್ತಿಗೆ ಪಡೆದ ಎಲ್&ಟಿ ಕಂಪನಿ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ್ ಬೆನಕೆಗೂ ಬೆಳಗಾವಿಯ ಬಸವ ಕಾಲೋನಿ ನಿವಾಸಿಗಳು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕರು ನೀರು ಪೂರೈಕೆ ಗುತ್ತಿಗೆ ಪಡೆದ ಎಲ್&ಟಿ ಕಂಪನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದರು. ಕಳೆದ ಹದಿನೈದು ದಿನಗಳಿಂದ ನೀರು ಪೂರೈಕೆ ಆಗುತ್ತಿಲ್ಲ.. ಎಲ್&ಟಿ ಕಂಪನಿಗೆ ನೀರು ಪೂರೈಕೆ ಗುತ್ತಿಗೆ ನೀಡುವ ಮೊದಲು ಸಮರ್ಪಕ ನೀರು ಪೂರೈಕೆಯಾಗುತ್ತಿತ್ತು. ಎರಡು ಮೂರು ದಿನಕ್ಕೊಮ್ಮೆಯಾದರೂ ನೀರು ಪೂರೈಕೆಯಾಗುತ್ತಿತ್ತು. ಕಂಪನಿಯವರು ಬಂದ ಮೇಲೆ ಸಮಸ್ಯೆಯಾಗುತ್ತಿದೆ. ಮೊದಲಿನಂತೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಆಗ್ರಹಿಸದರು.
ಹತ್ತು ದಿನಕ್ಕೊಮ್ಮೆ ನೀರು; ಜನ ಕಂಗಾಲು: ಬೆಳಗಾವಿ ನಗರಕ್ಕೆ ಎರಡು ಡ್ಯಾಂಗಳಿಂದ ನೀರು ಸಪ್ಲೈ ಆಗುತ್ತದೆ. ಬರ ಬಂದರೂ ಮೂರು ವರ್ಷ ಸಾಕಾಗುವಷ್ಟು ನೀರು ಡ್ಯಾಂಗಳಲ್ಲಿ ಇರುತ್ತದೆ. ರಕ್ಕಸಕ್ಕೊಪ್ಪ ಡ್ಯಾಂ ಮತ್ತು ಹಿಡಕಲ್ ಡ್ಯಾಂ ನಿಂದ ನೀರು ಸಪ್ಲೈ ಆಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ನೀರಿದೆ. ಆದರೆ ಪೈಪ್ ಲೈನ್ ವ್ಯವಸ್ಥೆ ಹಾಳಾಗಿ ಈ ರೀತಿ ಸ್ಥಿತಿ ಎದುರಾಗಿದೆ. ಇದರಿಂದ ಬೆಳಗಾವಿ ನಗರದ ಬಹುತೇಕ ವಾರ್ಡ್ಗಳಲ್ಲಿ ಹತ್ತು ದಿನಕ್ಕೊಮ್ಮೆ ನೀರು ಬರುತ್ತಿದೆ. ಈ ಕಾರಣಕ್ಕೆ ನಗರದ ಜನ ಕಂಗಾಲಾಗಿದ್ದು, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ
ಶ್ರೀಶೈಲದಲ್ಲಿ ಬಾಗಲಕೋಟೆ ಮೂಲದ ಯುವಕನ ಮೇಲೆ ಹಲ್ಲೆ; ಆತಂಕದಲ್ಲಿ ಕುಟುಂಬಸ್ಥರು- ಸಿಎಂ ಬೊಮ್ಮಾಯಿ ಹೇಳಿದ್ದೇನು?
Published On - 2:18 pm, Thu, 31 March 22