ಬೆಳಗಾವಿ ವಿಭಜಿಸಿ 3 ಜಿಲ್ಲೆಗಳನ್ನಾಗಿ ಮಾಡಿದರೆ ಏನು ತಪ್ಪಿದೆ? ಶಾಸಕ ಗಣೇಶ್ ಹುಕ್ಕೇರಿ ಪ್ರಶ್ನೆ
ರಾಜ್ಯದ ಎರಡನೇ ಅತಿದೊಡ್ಡ ಬೆಳಗಾವಿ ಜಿಲ್ಲೆಯನ್ನು ಚಿಕ್ಕೋಡಿ, ಗೋಕಾಕ ಜಿಲ್ಲೆಯಾಗಿ ವಿಭಜನೆ ಆಗಬೇಕು ಎಂಬುದು ಕಳೆದ ಮೂರು ದಶಕಗಳ ಹೋರಾಟ ನಡೆಯುತ್ತಿದೆ. ಇದರ ಮಧ್ಯೆ ಅಥಣಿ, ಬೈಲಹೊಂಗಲ, ಗೋಕಾಕ್ ಜಿಲ್ಲೆ ಮಾಡಲು ಬೇಡಿಕೆಯಿದ್ದು, ಬೆಳಗಾವಿ ವಿಭಜಿಸಿ 3 ಜಿಲ್ಲೆಗಳನ್ನಾಗಿ ಮಾಡಿದರೆ ಏನು ತಪ್ಪಿದೆ ಎಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ.
ಚಿಕ್ಕೋಡಿ, ಆಗಸ್ಟ್ 30: ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಶಾಸಕರ ಸಭೆಯಲ್ಲಿ ಒತ್ತಾಯ ಕೇಳಿ ಬಂದಿತ್ತು. ಚಿಕ್ಕೋಡಿ, ಗೋಕಾಕ ಜಿಲ್ಲೆ ಆಗಬೇಕು ಎಂಬುದು ಕಳೆದ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಸದ್ಯ ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಶಾಸಕ ಗಣೇಶ್ ಹುಕ್ಕೇರಿ (Ganesh Hukkeri) ಪ್ರತಿಕ್ರಿಯೆ ನೀಡಿದ್ದು, ಅಥಣಿ, ಬೈಲಹೊಂಗಲ, ಗೋಕಾಕ್ ಜಿಲ್ಲೆ ಮಾಡಲು ಬೇಡಿಕೆಯಿದ್ದು, ಬೆಳಗಾವಿ ವಿಭಜಿಸಿ 3 ಜಿಲ್ಲೆಗಳನ್ನಾಗಿ ಮಾಡಿದರೆ ಏನು ತಪ್ಪಿದೆ ಎಂದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.
ಇಡೀ ಜಿಲ್ಲೆ ನಾಯಕರನ್ನು ಕರೆದು ಚರ್ಚೆ ಮಾಡಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಬೇಗ ಜಿಲ್ಲೆ ವಿಭಜನೆ ಮಾಡಲಾಗುವುದು ಎಂದರು.
ಚಿಕ್ಕೋಡಿ ಉಪವಿಭಾಗ ಬರಪೀಡಿತ ಎಂದು ಘೋಷಣೆ ವಿಚಾರವಾಗಿ ಮಾತನಾಡಿ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮಳೆಯಾಗದೇ ಬೆಳೆ ಹಾನಿ ಆಗಿದೆ. ಮುಖ್ಯಮಂತ್ರಿಗಳು ಎಲ್ಲೆಲ್ಲಿ ಮಳೆ ಆಗಿಲ್ಲ ಅಲ್ಲಿ ಬರಪೀಡಿತ ಪ್ರದೇಶ ಘೋಷಣೆ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ಬೆಳಗಾವಿ ಜಿಲ್ಲೆ ವಿಭಜನೆ ಕಿಚ್ಚು: ಅಥಣಿ ಜಿಲ್ಲೆ ಮಾಡುವಂತೆ ಮಠಾಧೀಶರ ನೇತೃತ್ವದಲ್ಲಿ ಸಭೆ
ರಾಯಬಾಗ ಉನ್ನತ ಮಟ್ಟದ ಕಾಲುವೆಗೆ ನೀರು ಬಿಡುಗಡೆಗೆ ಆಗ್ರಹವಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ರಾಯಬಾಗ ಮಾಶ್ಯಾಳ ಕೆರೆ ತುಂಬಿದ ಬಳಿಕ ನೀರು ಹರಿದು ಬರುತ್ತೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ವಿಚಾರವಾಗಿ, ಶಿಕ್ಷಕರ ಕೊರತೆ ಕೇವಲ ಚಿಕ್ಕೋಡಿಯಲ್ಲಿ ಇಲ್ಲ ಇಡೀ ರಾಜ್ಯದಲ್ಲಿ ಇದೆ ಎಂದರು.
ಲೋಕಸಭೆ ಚುನಾವಣೆಗೆ ಪ್ರಕಾಶ್ ಹುಕ್ಕೇರಿ ಅಥವಾ ಗಣೇಶ ಹುಕ್ಕೇರಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್‌ನವರು ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ ವಿಭಜನೆ: ಬೈಲಹೊಂಗಲ ನಿವಾಸಿಗಳ ಆಗ್ರಹದ ಬಳಿಕ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕೆಂಬ ಒತ್ತಾಯ
ಮದುವೆ ಸಮಾರಂಭದಲ್ಲಿ ಊಟ ಸೇವಿಸಿ ಅಸ್ವಸ್ಥನಾದವನಿಗೆ ದೃಷ್ಟಿದೋಷ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ನಾನು, ಎಸಿ, ಎಸ್‌ಪಿ ಆಸ್ಪತ್ರೆಗೆ ಭೇಟಿ ನೀಡಿದ್ದೆವು. ಈ ಬಗ್ಗೆ ಡಿಹೆಚ್‌ಒ ಜೊತೆ ಚರ್ಚೆ ಮಾಡುವೆ ಎಂದರು.
ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ರಕ್ಷಾ ಬಂಧನ ವಿಶೇಷ ದಿನದಂದು ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಚಿಕ್ಕೋಡಿಯಲ್ಲಿ ವಿಶೇಷ ಆಸಕ್ತಿ ತಗೆದುಕೊಂಡು ನೋಂದಣಿ ಮಾಡಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು, ನಮ್ಮ ಕೌನ್ಸಿಲರ್‌ಗಳು ವಿಶೇಷ ಆಸಕ್ತಿ ತಗೆದುಕೊಂಡು ನೋಂದಣಿ ಮಾಡಿಸಿದ್ದಾರೆ. ಇಂದು ಇಡೀ ದೇಶಕ್ಕೆ ನಮ್ಮ ಕರ್ನಾಟಕ ರಾಜ್ಯ ಮಾದರಿಯಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.