- Kannada News Photo gallery Colorful Kannada Kalarava in a Belgaum college Here are the photos of the students dressed in folk dress
ಬೆಳಗಾವಿ ಕಾಲೇಜೊಂದರಲ್ಲಿ ಕಲರ್ಫುಲ್ ಕನ್ನಡ ಕಲರವ; ಜಾನಪದ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು, ಇಲ್ಲಿವೆ ಫೋಟೋಸ್
ಕಾಲೇಜು ತುಂಬೆಲ್ಲ ಕನ್ನಡದ ಕಲರವ, ಎಲ್ಲೆಂದರಲ್ಲಿ ಕನ್ನಡದ ಬಾವುಟಗಳ ಪ್ರದರ್ಶನ, ಪ್ರತಿದಿನ ಜೀನ್ಸ್-ಟೀ ಶರ್ಟ್ ಮತ್ತು ಚೂಡಿದಾರ್‌ಗಳಲ್ಲಿ ಆಗಮಿಸುತ್ತಿದ್ದ ಹುಡುಗಿಯರು. ಇಂದು ಸಾಂಪ್ರದಾಯಿಕ ಊಡುಗೆಗಳನ್ನು ತೊಟ್ಟು ಮಿರಿಮಿರಿ ಮಿಂಚುತ್ತಿದ್ರೆ, ಮತ್ತೊಂದೆಡೆ ಹುಡಗರು ಧೋತಿ, ಪಂಚೆ, ಕುರ್ತಾ ಹಾಕಿ ಕಾಲೇಜಿನಲ್ಲಿ ಹೆಜ್ಜೆ ಹಾಕಿದರು. ಅಷ್ಟಕ್ಕೂ ಪಾಠಕ್ಕೆ ಗುಡ್ ಬೈ ಹೇಳಿ, ಇಂದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಮಾಡಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ.
Updated on: Aug 30, 2023 | 3:59 PM

ಆಧುನಿಕತೆಯ ಜೀವನಶೈಲಿ ಭರಾಟೆಯಲ್ಲಿ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಸೊಬಗಿನ ಜೊತೆಗೆ ಕನ್ನಡ ಭಾಷೆ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವಿಶೇಷ ಕಾರ್ಯಕ್ರಮವನ್ನು ಕ್ರಾಂತಿವೀರ ಸಂಗೋಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಡಿದೆ.

ಬೆಳಗಾವಿ ಶ್ರೀನಗರದಲ್ಲಿರುವ ಸಂಗೋಳ್ಳಿ ರಾಯಣ್ಣ ಕಾಲೇಜಿನಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಕಲರವ್ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಿತ್ಯ ಜೀನ್ಸ್ ಪ್ಯಾಂಟ್, ಶರ್ಟ್, ಟೀ ಶರ್ಟ್ ನಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಇಂದು ಗ್ರಾಮೀಣ ಸೊಗಡನ್ನು ಬಿಂಬಿಸುವ ಧೋತಿ, ಪಂಚೆ, ಕುರ್ತಾ ತೊಟ್ಟು ಮಿಂಚುತ್ತಿದ್ರೂ.

ಮತ್ತೊಂದೆಡೆ ನಾವೇನೂ ಕಮ್ಮಿ ಇಲ್ಲವೆಂದು ವಿದ್ಯಾರ್ಥಿನಿಯರು ರೇಷ್ಮೆ ಸೀರೆ ಧರಿಸಿ ಮೈತುಂಬ ಒಡವೆಗಳನ್ನು ಹಾಕಿಕೊಂಡು ಕಾಲೇಜಿನತ್ತ ಇಂದು ಹೆಜ್ಜೆ ಹಾಕಿದ್ರೂ. ಸಭಾಕಾರ್ಯಾಕ್ರಮ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿ ಎಂಜಾಯ್ ಮಾಡಿದರು.

ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಡಿಜೆ ಸೌಂಡ್ಗೆ, ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಇದೇ ಮೊದಲ ಬಾರಿಗೆ ಕಾಲೇಜಿನಲ್ಲಿ ಕನ್ನಡ ಕಲರವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ವಿದ್ಯಾರ್ಥಿನಿಯರು ಜಾನಪದ ಶೈಲಿಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಬಂದಿದ್ದೇವೆ. ಹುಡುಗರು ಧೋತಿ ಪಂಚೆ ತೊಟ್ಟು ಬಂದಿದ್ದಾರೆ ಎಲ್ಲರೂ ಖುಷಿಯಿಂದಲೇ ಕನ್ನಡ ಹಬ್ಬವನ್ನ ಆಚರಣೆ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ಖುಷಿ ಹಂಚಿಕೊಂಡರು.

ಇನ್ನು ಕಾಲೇಜಿನಲ್ಲಿ ಕನ್ನಡ ಹಬ್ಬ ಅಷ್ಟಕ್ಕೇ ಸೀಮಿತವಾಗದೇ ಸಾಂಪ್ರದಾಯಿಕ ಉಡುಗೆಗಳ ಬಗ್ಗೆ ಒಲವು ಮೂಡಿಸುವ ಪ್ರಯತ್ನವೂ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಕಂಡು ಬಂತು. ವಿದ್ಯಾರ್ಥಿನಿಯರು ಮಾತ್ರವಲ್ಲ, ಪ್ರಾಂಶುಪಾಲರು, ಕಾಲೇಜಿನ ಎಲ್ಲ ಸಿಬ್ಬಂದಿ ಸಾಂಪ್ರದಾಯಿಕ ವಸ್ತ್ರಗಳಲ್ಲಿ ಮಿಂಚುತ್ತಿದ್ದರು. ಮಹಿಳಾ ಸಿಬ್ಬಂದಿ ಸೀರೆಯುಟ್ಟಿದ್ದರೆ, ಪುರುಷ ಸಿಬ್ಬಂದಿ ಬಿಳಿ ಅಂಗಿ ಮತ್ತು ಪಂಚೆಯಲ್ಲಿ ಮಿಂಚುತ್ತಿದ್ದರು. ಇನ್ನೂ ನಿತ್ಯ ಬರೀ ಓದು, ಪಾಠ ಅಂತಿದ್ದವರು ಇಂದು ಎಲ್ಲವನ್ನೂ ಮರೆತು ಎಂಜಾಯ್ ಮಾಡಿದರು.

ಡಿಗ್ರಿ ಮೊದಲ ವರ್ಷದಿಂದ ಮೂರನೇ ವರ್ಷದ ವಿದ್ಯಾರ್ಥಿಗಳೆಲ್ಲರೂ ಜೂನಿಯರ್ ಸೀನಿಯರ್ ಅನ್ನದೆ ಎಲ್ಲರೂ ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕರ್ನಾಟಕ ರಾಜ್ಯೋತ್ಸವದಂತೆ ಆಚರಣೆ ಮಾಡಿದ್ದಾರೆ. ವಿದೇಶಿಯ ಸಂಪ್ರದಾಯ ರೂಢಿಸಿಕೊಳ್ಳುತ್ತಿರುವ ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿ ಹೇಗಿತ್ತು? ಅದನ್ನು ಹೇಗೆ ಉಳಿಸಿಕೊಂಡು ಹೋಗಬೇಕು ಅನ್ನೋದನ್ನ ಪರಿಚಯ ಮಾಡುವ ನಿಟ್ಟಿನಲ್ಲಿ ಕಾಲೇಜು ಇಂದು ಕನ್ನಡ ಹಬ್ಬ ಆಚರಣೆ ಜತೆಗೆ ಸಂಪ್ರದಾಯ ಉಡುಗೆ ತೊಡುಗೆಯನ್ನ ಪರಿಚಯಿಸುವ ಕೆಲಸ ಮಾಡಿದೆ.

ಬೆಳಗಾವಿ ಅಂದರೆ, ಬರೀ ಮರಾಠಿಗರ ಪ್ರಾಬಲ್ಯ ಅನ್ನೋವಾಗಲೇ ಕಾಲೇಜಿನಲ್ಲಿ ಕನ್ನಡ ಕಲರವ ಮಾಡಿದ್ದು, ಕನ್ನಡಿಗರು ಖುಷಿ ಪಡುವಂತೆ ಮಾಡಿದೆ. ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದಲ್ಲದೇ ವಿದ್ಯಾರ್ಥಿಗಳಿಗೆ ಭಾಷಾ ಪಾಂಡಿತ್ಯ, ಕನ್ನಡದ ಜ್ಞಾನ ಬೆಳೆಸುವ ಕಾರ್ಯಕ್ರಮವಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.

ಒಟ್ಟಾರೆ ನಗರ ಪ್ರದೇಶದ ವಿದ್ಯಾರ್ಥಿಗಳೇ ಇರುವ ಬೆಳಗಾವಿ ನಗರದ ಸಂಗೋಳ್ಳಿ ರಾಯಣ್ಣ ಕಾಲೇಜಿನಲ್ಲಿ ಕನ್ನಡ ಕಲರವ್ ಕಾರ್ಯಕ್ರಮ ವಿದ್ಯಾರ್ಥಿಗಳು ಸಾಕಷ್ಟು ಎಂಜಾಯ್ ಮಾಡುವಂತೆ ಮಾಡಿದೆ. ಜತೆಗೆ ಬರೀ ಪಾಠ ಅಂತಿದ್ದವರಿಗೆ ಕನ್ನಡ ನಾಡಿನ ಭವ್ಯ ಸಂಸ್ಕೃತಿ ಉಡುಗೆ ತೊಡುಗೆ ಬಗ್ಗೆಯೂ ಒಲವು ಮೂಡಿಸುವ ಕಾರ್ಯಕ್ರಮ ಆಗಿದಂತೂ ಸುಳ್ಳಲ್ಲ. ಈ ರೀತಿ ಕಾರ್ಯಕ್ರಮಗಳು ಬೆಳಗಾವಿಯ ಎಲ್ಲ ಕಾಲೇಜುಗಳಲ್ಲಿ ಆಗಲಿ ಎಂಬುದು ಎಲ್ಲ ವಿದ್ಯಾರ್ಥಿಗಳ ಅಭಿಪ್ರಾಯ.



















