ಬೆಳಗಾವಿ, (ಮಾರ್ಚ್ 04): ಪಾಗಲ್ ಪ್ರೇಮಿಯೊಬ್ಬ ಪ್ರೇಯಿಸಿಯ ಕತ್ತು ಸೀಳೆ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿ ನಡೆದಿದೆ. ಐಶ್ವರ್ಯಾ ಮಹೇಶ್ ಲೋಹಾರ(18) ಕೊಲೆಯಾದ ಯುವತಿ. ಇನ್ನು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರನನ್ನು ಪ್ರಶಾಂತ್ ಯಲ್ಲಪ್ಪ ಕುಂಡೇಕರ(29) ಎಂದು ಗುರುತಿಸಲಾಗಿದೆ. ಇಂದು (ಮಾರ್ಚ್ 04) ಸಂಜೆ ಈ ಜೋಡಿ, ಐಶ್ವರ್ಯಾ ಚಿಕ್ಕಮ್ಮನ ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ನಂತರ ಪ್ರಶಾಂತ್, ಚಾಕುವಿನಿಂದ ಪ್ರೇಯಸಿ ಐಶ್ವರ್ಯಾಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಅದೇ ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ಪ್ರಾಣಬಿಟ್ಟಿದ್ದಾನೆ.
ಐಶ್ವರ್ಯಾ ಮಹೇಶ್ ಲೋಹಾರ ಹಾಗೂ ಪ್ರಶಾಂತ್ ಯಲ್ಲಪ್ಪ ಕುಂಡೇಕರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಈ ಜೋಡಿ ಇಂದು ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿರುವ ಐಶ್ವರ್ಯಾಳ ಚಿಕ್ಕಮ್ಮನ ಮನೆ ಬಂದಿತ್ತು. ಆಗ ಏನಾಯ್ತೋ ಏನೋ ಇಬ್ಬರು ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಬಳಿಕ ಪ್ರಶಾಂತ್ ಏಕಾಏಕಿ ಚಾಕುವಿನಿಂದ ಪ್ರೇಯಸಿ ಐಶ್ವರ್ಯಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ಪ್ರಕಾಶ್ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಕೊಯ್ದುಕೊಂಡು ಪ್ರಾಣ ಬಿಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನಂತರ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹಾಗೂ ಡಿಸಿಪಿ ರೋಹನ್ ಜಗದೀಶ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.
ಈ ಬಗ್ಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇವತ್ತು ಬಹಳ ಸ್ಯಾಡ್ ಇನ್ಸಿಡೆಂಟ್ ಆಗಿದೆ. ಐದು ಗಂಟೆಯ ಸುಮಾರಿಗೆ ಇನ್ಸಿಡೆಂಟ್ ಆಗಿದೆ. ಮರ್ಡರ್ ನಿಂದ ಇಬ್ಬರೂ ಸತ್ತಿದ್ದಾರೆ. ಹುಡುಗ ಮತ್ತು ಹುಡುಗಿಯ ನಡುವೆ ಪ್ರೇಮ ಇತ್ತು. ಹುಡುಗ ಮದುವೆಗೆ ಒತ್ತಾಯಿಸುತ್ತಿದ್ದ. ಚೆನ್ನಾಗಿ ಕೆಲಸ ಮಾಡಿ ಸಂಬಳ ಜಾಸ್ತಿ ತಗೋ ಎಂದು ಹುಡುಗಿ ತಾಯಿ ಹೇಳಿದ್ದರು. ಹುಡುಗ ಹುಡುಗಿಗೆ ಮದುವೆ ಮಾಡಿಕೋ ಎಂದು ಪೋರ್ಸ್ ಮಾಡುತ್ತಿದ್ದ. ವಿಷದ ಬಾಟಲ್ ಕೂಡ ಜೊತೆಗೆ ತಂದಿದ್ದಾರೆ. ಮೊದಲು ಹುಡುಗ ಚಾಕುವಿನಿಂದ ಇರಿದಿದ್ದಾನೆ. ನಂತರ ಕುತ್ತಿಗೆ ಕುಯ್ದುಕೊಂಡು ಹುಡುಗ ಸಹ ತೀರಿ ಹೋಗಿದ್ದಾನೆ ಎಂದು ಮಾಹಿತಿ ನೀಡಿದರು.
ಹುಡುಗ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಕೊಲೆ ನಡೆದಿದ್ದು, ಹುಡುಗಿಯ ಚಿಕ್ಕಮ್ಮನ ಮನೆ ಬಳಿ. ಕೊಲೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹುಡುಗ ಯಳ್ಳೂರು ಗ್ರಾಮದವನು. ಒಂದೂವರೆ ವರ್ಷದಿಂದ ಇಬ್ಬರು ಲವ್ ಮಾಡುತ್ತಿದ್ದರು. ಹುಡುಗಿಯೂ ಸಹ ಮೇಜರ್ ಇದ್ದು, ತನಿಖೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.