
ಬಳ್ಳಾರಿ, ಅಕ್ಟೋಬರ್ 10: ಒಂದು ಸಂದರ್ಭದಲ್ಲಿ ಈರುಳ್ಳಿ ಬೆಲೆ (Onion Price) 100 ರೂಪಾಯಿಯ ಗಡಿದಾಟಿತ್ತು. ಈರುಳ್ಳಿ ಬೆಳೆದ ರೈತ ಕೋಟ್ಯಾಧಿಪತಿಯಾಗಿದ್ದ. ಆದರೆ ಈಗ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದಾನೆ. ಈ ವರ್ಷ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಸರಿಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆಯನ್ನು ಬೆಳೆದಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಒಳ್ಳೆಯ ಇಳುವರಿ ಸಹ ಬಂದಿದೆ. ಲಕ್ಷಾಂತರ ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರು ಈ ವರ್ಷ ಬಂಪರ್ ಬೆಳೆ ಬೆಳೆದು ಸಾಲ ತೀರಿಸಿದರಾಯಿತು ಎಂದು ಯೋಚನೆ ಮಾಡಿದ್ದರು. ಆದರೆ ಈರುಳ್ಳಿ ದರ ಕುಸಿತದಿಂದ ರೈತ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ದಾಸಾಪುರ ಗ್ರಾಮದಲ್ಲಿ ರೈತ ಬಸಪ್ಪ ಈ ವರ್ಷ ನಾಲ್ಕು ಎಕರೆ ಈರುಳ್ಳಿ ಬೆಳೆದಿದ್ದರು. ಒಂದು ಎಕರೆಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರಿಂದ ಇಳುವರಿಯನೋ ಪರವಾಗಿಲ್ಲ . ಎಕರೆಗೆ ಕನಿಷ್ಠ 60 ಚೀಲವಾದರೂ ಬರುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆದರೆ ದರ ಮಾತ್ರ ಒಂದು ಕೆಜಿ ಗೆ 5 ರೂ ಇದೆ. ಹೀಗಾಗಿ ಹಾಕಿರುವ ಬಂಡವಾಳ ಸಹ ಬರವುದಿಲ್ಲ, ಏನು ಮಾಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಬೆಂಬಲ ಬೆಲೆಯೊಂದಿಗೆ ಈರುಳ್ಳಿ ಖರೀದಿ ಮಾಡಬೇಕು. ಕನಿಷ್ಠ ಒಂದು ಕೆಜಿ ಈರುಳ್ಳಿಗೆ 30 ರಿಂದ 35 ರೂ ಕೊಟ್ಟು ಈರುಳ್ಳಿ ಖರೀದಿ ಮಾಡಬೇಕು. ಹಾಗಾದರೆ ಮಾತ್ರ ರೈತ ಉಳಿಯುತ್ತಾನೆ. ಇಲ್ಲವಾದ್ರೆ ರೈತ ಬದುಕುವುದು ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಈರುಳ್ಳಿ ಬೆಲೆ ಕುಸಿತ; ಲೋಡ್ಗಟ್ಟಲೇ ಈರುಳ್ಳಿ ಬಿಟ್ಟುಹೋದ ರಾಯಚೂರು ರೈತರು
ಒಟ್ಟಿನಲ್ಲಿ ಈ ವರ್ಷ ಈರುಳ್ಳಿ ಬೆಳೆದ ರೈತ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾನೆ. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಈರುಳ್ಳಿ ಬೆಳೆದರೆ ಮಾರುಕಟ್ಟೆಯಲ್ಲಿ ಸೂಕ್ತ ದರ ಸಿಗದೆ ಕಂಗಾಲಾಗಿದ್ದಾನೆ. ಕೂಡಲೇ ಸರ್ಕಾರ ಎಚ್ಚೆತ್ತು ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನ್ನುವುದು ರೈತರ ಒತ್ತಾಯವಾಗಿದೆ.