ಲಿಂಗಾಯತರ ಬಗ್ಗೆ ಅವಹೇಳನಕಾರಿ ಮಾತು: ಕನೇರಿ ಸ್ವಾಮೀಜಿ ಮತ್ತೊಂದು ಶಾಕ್ ಕೊಟ್ಟ ಕೋರ್ಟ್
ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸ್ವಾಮೀಜಿಗಳ ಕೀಳುಮಟ್ಟದ ಹೇಳಿಕೆಗೆ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಮೌನವಾಗಿ ಧ್ಯಾನ ಮಾಡುವಂತೆ ಸಲಹೆ ನೀಡಿ ಹೈಕೋರ್ಟ್ ಆದೇಶವನ್ನೂ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ಇದೀಗ ಲಿಂಗಾಯತ ಮಠಗಳ ಒಕ್ಕೂಟ ಸಲ್ಲಿಸಿದ ದೂರಿನ ಮೇರೆಗೆ ಕೋರ್ಟ್, ಸ್ವಾಮೀಜಿ ಖಡಕ್ ಸೂಚನೆ ನೋಡಿದೆ.

ಬೆಂಗಳೂರು, (ಅಕ್ಟೋಬರ್ 31): ಲಿಂಗಾಯತ ಮಠಗಳ ಒಕ್ಕೂಟದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗೆ (kaneri math kadasiddeshwara swamiji) ಕೋರ್ಟ್ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿದೆ. ಮಹಾರಾಷ್ಟ್ರದಲ್ಲಿ ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಲಿಂಗಾಯತ ಮಠಗಳ ಒಕ್ಕೂಟ ದಾಖಲಿಸಿದ ಮಾನನಷ್ಟ ಮೊಕ್ಕದಮೆ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 31ನೇ ಸಿಸಿಹೆಚ್ ಕೋರ್ಟ್, ಅವಹೇಳನಕಾರಿ ಹೇಳಿಕೆ ನೀಡದಂತೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿರ್ಬಂಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ಅವಹೇಳನಕಾರಿ ಹೇಳಿಕೆ ಖಂಡಿಸಿ ಲಿಂಗಾಯತ ಮಠಗಳ ಒಕ್ಕೂಟವು, ಸ್ವಾಮೀಜಿ ವಿರುದ್ಧ 1 ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಅಶ್ಲೀಲ ಪದ ಪ್ರಯೋಗಿಸಿ ಲಿಂಗಾಯತ ಮತಗಳ ಒಕ್ಕೂಟಕ್ಕೆ ತೆಗಳಿದ್ದಾರೆ. ಸ್ವಾಮೀಜಿ ಹೇಳಿಕೆಯಿಂದ ಲಿಂಗಾಯತ ಮಠಗಳ ಒಕ್ಕೂಟದ ಗೌರವಕ್ಕೆ ಧಕ್ಕೆಯಾಗಿದೆ. ಇಂತಹ ಹೇಳಿಕೆ ನೀಡದಂತೆ ಸ್ವಾಮೀಜಿಗೆ ನಿರ್ಬಂಧ ವಿಧಿಸುವಂತೆ ಮನವಿ ಮಾಡಿತ್ತು. ಈ ಪ್ರಕರಣ ಸಂಬಂಧ ಒಕ್ಕೂಟದ ಪರವಾಗಿ ವಕೀಲೆ ವಿಜೇತಾ ಆರ್. ನಾಯ್ಕ್ ವಾದ ಮಂಡಿಸಿದರು. ಈ ವಾದ ಆಲಿಸಿದ ಬೆಂಗಳೂರಿನ 31 ನೇ ಸಿಸಿಹೆಚ್ ಕೋರ್ಟ್, ಅವಹೇಳನಕಾರಿ ಹೇಳಿಕೆ ನೀಡದಂತೆ ನಿರ್ಬಂಧಿಸಿ ಮಧ್ಯಂತರ ಆದೇಶಿಸಿದ್ದು, ಈ ಬಗ್ಗೆ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಕನ್ನೇರಿ ಶ್ರೀಗಳಿಗೆ ವಿಜಯಪುರಕ್ಕೆ ನಿರ್ಬಂಧ: ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್
ಪ್ರಕರಣದ ಹಿನ್ನೆಲೆ
ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಸಮಾರಂಭಕ್ಕೆ ತೆರಳಿದ್ದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕರ್ನಾಟಕದ ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ಎರಡು ತಿಂಗಳಿಂದ ದೇವಾಲಯಕ್ಕೆ ಹೋಗಬೇಡಿ ಎಂದು ಪ್ರಚಾರ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧೀಪತಿಗಳ ಒಕ್ಕೂಟದ ಕಲಾವಿದರು ಸೇರಿ ‘ಬಸವ ಸಂಸ್ಕೃತಿ ಅಭಿಯಾನ’ ಎನ್ನುವ ನಾಟಕವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಗುಡಿಯಲ್ಲಿ ದೇವರಿಲ್ಲ. ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ ಎನ್ನುತ್ತಿದ್ದಾರೆ. ಇವರಿಗೆ ನಾನೇ ಬುದ್ಧಿ ಹೇಳಬೇಕು ಎಂದು ಕೆಲ ಅಸಂವಿಧಾನಿಕ ಪದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಸ್ವಾಮೀಜಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ 2 ತಿಂಗಳ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸ್ವಾಮೀಜಿ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋಗಿದ್ದರು. ಆದರೆ, ಸಾಮಾನ್ಯ ಜನರೂ ಕೂಡ ಸ್ವಾಮೀಜಿ ಬಳಸಿದ ಭಾಷೆಯನ್ನು ಬಳಸುವುದಿಲ್ಲ ಎಂದು ಹೇಳಿದ್ದ ಕೋರ್ಟ್, ಜಿಲ್ಲಾಡಳಿತದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಸ್ವಾಮೀಜಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಸಹ ಸ್ವಾಮೀಜಿ ಮೇಲ್ಮನವಿಯನ್ನು ವಜಾಗೊಳಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



