One Minute Apology ಪುಸ್ತಕ ಓದುವಂತೆ ರೂಪಾ ಹಾಗೂ ರೋಹಿಣಿ ಸಿಂಧೂರಿಗೆ ಕೋರ್ಟ್ ಸಲಹೆ
ಐಪಿಎಸ್ ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಗುದ್ದಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿವೆ. ಯಾರೂ ಹಿಂದೆ ಸರಿಯದೇ ಪರಸ್ಪರ ಇಬ್ಬರೂ ಸಹ ಕಾನೂನು ಹೋರಾಟಕ್ಕಿಳಿದಿದ್ದು, ಈ ಸಂಬಂಧ ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಕೇಸ್ನ ಸಾಕ್ಷ್ಯ ವಿಚಾರಣೆ ವೇಳೆ ಕೋರ್ಟ್ ಇಬ್ಬರು ಅಧಿಕಾರಿಗಳಿಗೆ ಮಹತ್ವದ ಸಲಹೆಯೊಂದನ್ನು ನೀಡಿದೆ.

ಬೆಂಗಳೂರು, (ಫೆಬ್ರವರಿ.05): ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ದಾಖಲಿಸಿದ್ದ ಮಾನನಷ್ಟ ಪ್ರಕರಣ ಸಂಬಂಧ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ ನಲ್ಲಿಂದು ಸಾಕ್ಷ್ಯ ವಿಚಾರಣೆ ನಡೆದಿದ್ದು, ಈ ವೇಳೆ ಕೋರ್ಟ್ ಗೆ ಹಾಜರಾಗಿದ್ದ ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ನಡುವೆ ರಾಜಿ ಮಾಡಲು ಮುಂದಾಗಿದೆ. ಇಬ್ಬರೂ ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳಾಗಿದ್ದೀರಿ. ನಿಮ್ಮ ಸಮಯ ಸಮಾಜಕ್ಕಾಗಿ ಮೀಸಲಿಡಬೇಕು. ಕೋರ್ಟ್ ಕಲಾಪದಲ್ಲಿ ಸಮಯ ವ್ಯಯಿಸುವ ಬದಲು ರಾಜಿ ಸಾಧ್ಯವೇ ಯೋಚಿಸಿ ಎಂದು ನ್ಯಾಯಾಧೀಶ ವಿಜಯ್ ಕುಮಾರ್ ಜಾಟ್ಲಾ ಅವರು ಕಿವಿ ಮಾತು ಹೇಳಿದರು. ಅಲ್ಲದೇ ಇಬ್ಬರು ಅಧಿಕಾರಿಗಳಿಗೆ One Minute Apology ಪುಸ್ತಕ ಓದುವಂತೆ ಸಲಹೆ ನೀಡಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದರು.
ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಂಭೀರ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ನಡುವಿನ ಜಗಳ ಲೋಕಲ್ ಕೋರ್ಟ್, ಹೈಕೋರ್ಟ್ ಮುಗಿದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದ್ರೆ, ಸುಪ್ರೀಂಕೋರ್ಟ್ನಲ್ಲೂ ಸಹ ಈ ಇಬ್ಬರು ಅಧಿಕಾರಿಗಳ ಜಗಳ ಬಗೆಹರಿದಿಲ್ಲ. ನ್ಯಾಯಾಧೀಶರ ಮನವಿಗೂ ಬಗ್ಗದ ಅಧಿಕಾರಿಗಳು, ನಾನಾಗಿಯೇ ಸೋಲುವುದಿಲ್ಲ ಎಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಕೊನೆಗೆ ಸುಪ್ರೀಂಕೋರ್ಟ್, ವಿಚಾರಣಾಧೀನಾ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಹೇಳಿತ್ತು.
ಇದನ್ನೂ ಓದಿ: ಜಡ್ಜ್ ಮನವಿಗೂ ಬಗ್ಗದ IPS-IAS:ಸುಪ್ರೀಂಕೋರ್ಟ್ನಲ್ಲಿ ಸಿಂಧೂರಿ-ರೂಪ ಪ್ರತಿಷ್ಠೆ ಜಿದ್ದು ಹೇಗಿತ್ತು ನೋಡಿ
ಇದೀಗ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್ ಸಹ ಇಬ್ಬರು ಅಧಿಕಾರಿಗಳ ಮಧ್ಯ ರಾಜಿ ಸಂಧಾನ ಮಾಡಲು ಪ್ರಯತ್ನ ನಡೆಸಿದೆ. ಹೀಗಾಗಿ ಕೆಲ ಕಿವಿ ಮಾತು ಜೊತೆಗೆ One Minute Apology ಪುಸ್ತಕ ಓದುವಂತೆ ಸಲಹೆ ನೀಡಿದೆ. ಆದ್ರೆ, ಈ ಇಬ್ಬರು ಅಧಿಕಾರಿಗಳು ರಾಜಿಗೆ ಒಪ್ಪಿಕೊಳ್ಳುತ್ತಾರಾ ಅಥವಾ ಕಾನೂನು ಹೋರಾಟ ಮುಂದುವರಿಸುತ್ತಾರಾ ಎನ್ನುವುದು ಕಾದುನೋಡಬೇಕಿದೆ.
ಇನ್ನು ಒಂದು ವೇಳೆ ಇಬ್ಬರು ಅಧಿಕಾರಿಗಳು ರಾಜಿ ಸಂಧಾನಕ್ಕೆ ಒಪ್ಪದಿದ್ದರೆ ಕೋರ್ಟ್ ಏನು ಆದೇಶ ನೀಡುತ್ತೆ ಎನ್ನುವುದು ಸಹ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 pm, Wed, 5 February 25