ಬೆಂಗಳೂರು: ಜುಲೈ ಅಂತ್ಯದೊಳಗೆ ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ರೈಲು (Vande Bharat Express) ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಗುರುವಾರ ಘೋಷಿಸಿದ್ದಾರೆ. ಬೆಂಗಳೂರು-ಧಾರವಾಡ ನಡುವೆ ರೈಲು ಸಂಚಾರ ನಡೆಯಲಿದೆ. ಪ್ರಲ್ಹಾದ್ ಜೋಶಿ ಅವರು ಬುಧವಾರ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರನ್ನು ಭೇಟಿ ಮಾಡಿ ಕರ್ನಾಟಕದ ಐಟಿ ಹಬ್ ಮತ್ತು ಧಾರವಾಡವನ್ನು ಸಂಪರ್ಕಿಸುವ ವಂದೇ ಭಾರತ್ ರೈಲಿನ ಬಗ್ಗೆ ಚರ್ಚಿಸಿದ್ದರು. ವಂದೇ ಭಾರತ್ ರೈಲು ಓಡಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ ಎಂಬುದಾಗಿ ಜೋಶಿ ತಿಳಿಸಿದರು.
ಬೆಂಗಳೂರು ಮತ್ತು ಧಾರವಾಡ ನಡುವಿನ ವಂದೇ ಭಾರತ್ ರೈಲು 2023 ರ ಮಾರ್ಚ್‌ನಲ್ಲಿ ಉದ್ಘಾಟನೆಯಾಗಬೇಕಿತ್ತು. ಹಳಿಗಳ ವಿದ್ಯುದೀಕರಣ ಮತ್ತು ಟ್ರಾಕ್ಷನ್ ಸಬ್‌ಸ್ಟೇಷನ್‌ನಲ್ಲಿ ವಿಳಂಬ ಮತ್ತು ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಸೇರಿದಂತೆ ಹಲವು ಕಾರಣಗಳಿಂದ ಇದು ವಿಳಂಬವಾಗಿದೆ.
ಇದು ಕರ್ನಾಟಕದಲ್ಲಿ ಆರಂಭವಾಗಲಿರುವ ಎರಡನೇ ವಂದೇ ಭಾರತ್ ರೈಲು. ಮೊದಲ ರೈಲು ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಂಚರಿಸುತ್ತಿದೆ. ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಿದ್ದರು. ಮೈಸೂರು-ಬೆಂಗಳೂರು-ಚೆನ್ನೈ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸಹ ಹೌದು.
ಇದನ್ನೂ ಓದಿ: Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್, ಆನ್ಲೈನ್ ಟಿಕೆಟ್ ಬುಕಿಂಗ್ ವಿಧಾನ ಇಲ್ಲಿದೆ ನೋಡಿ
ದಕ್ಷಿಣ ಭಾರತದ ಮತ್ತೊಂದು ವಂದೇ ಭಾರತ್ ರೈಲಿಗೆ ಏಪ್ರಿಲ್ನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಈ ರೈಲು ಕೇರಳದ ತಿರುವನಂತಪುರ ಮತ್ತು ಕಾಸರಗೋಡು ಮಧ್ಯೆ ಸಂಚರಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Thu, 1 June 23