ಬೆಂಗಳೂರು: ಮೈಸೂರು ರಸ್ತೆ ಹಾಗೂ ಕೆಂಗೇರಿ ನಡುವಿನ 7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಜೂನ್ ತಿಂಗಳಲ್ಲಿ ಕಾರ್ಯಾರಂಭಿಸಲಿರುವ ನಿರೀಕ್ಷೆ ಇದೆ. ಈ ಮೆಟ್ರೋ ಯೋಜನೆಯ ವಿಸ್ತರಣೆಯಿಂದ ಸುಮಾರು 75,000 ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮೆಟ್ರೋ ಪಶ್ಚಿಮ ವಿಸ್ತೃತ ಮಾರ್ಗದಲ್ಲಿ (ನೇರಳೆ ಬಣ್ಣ) ಈ ತಿಂಗಳ ಅಂತ್ಯದಲ್ಲಿ, ರೈಲು ಪ್ರಯೋಗ ಪ್ರಯಾಣ ಆರಂಭಿಸಲಿದೆ.
ಈ ವಿಭಾಗದಲ್ಲಿ ಸುಮಾರು 75,000 ಪ್ರಯಾಣಿಕರು ರೈಲು ಬಳಸುವ ನಿರೀಕ್ಷೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನಿಯಮಿತ (BMRCL) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ. ಆದರೆ, ಕೊವಿಡ್-19 ಹಾಗೂ ವರ್ಕ್ ಫ್ರಮ್ ಹೋಮ್ ಕಾರಣದಿಂದ ಆರಂಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರಲೂಬಹುದು ಎಂದು ಅವರು ತಿಳಿಸಿದ್ದಾರೆ.
ವಿಶೇಷ ಎಂದರೆ, ದಿನನಿತ್ಯ ಪ್ರಯಾಣಿಸುವ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೊರೊನಾ ಬಳಿಕ ಇಳಿಕೆ ಕಂಡಿದೆ. ಈ ಮೊದಲು ಸುಮಾರು 5 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋ ಬಳಸುತ್ತಿದ್ದರು. ಈಗ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸುಮಾರು 1.9 ಲಕ್ಷಕ್ಕೆ ಇಳಿಕೆಯಾಗಿದೆ.
ಬಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿಗೆ ಮೆಟ್ರೋ ಗರಿಷ್ಠ ದರ ₹ 56 ಆಗಿರಲಿದೆ. ಮೆಟ್ರೋ ಅತಿ ಉದ್ದ ಮಾರ್ಗ ಎನಿಸಲಿರುವ ಕೆಂಗೇರಿಯಿಂದ ಸಿಲ್ಕ್ ಸಂಸ್ಥೆವರೆಗಿನ ಮಾರ್ಗಕ್ಕೆ ₹ 60 ಟಿಕೆಟ್ ದರ ಇರಲಿದೆ. ಟ್ರಾಕ್ ಹಾಗೂ ಸಿಗ್ನಲ್ ಸಂಬಂಧಿ ಕೆಲಸಗಳು ಈ ರಸ್ತೆಯಲ್ಲಿ ಅಂತಿಮ ಹಂತದಲ್ಲಿದೆ. ಮಾರ್ಚ್ ಅಂತ್ಯದಿಂದ ರೈಲು ಟೆಸ್ಟಿಂಗ್ ಆರಂಭವಾಗುವ ಸಾಧ್ಯತೆ ಇದೆ ಎಂದು ಸೇಠ್ ಮಾಹಿತಿ ನೀಡಿದ್ದಾರೆ.
ಹೊಸ ಮೆಟ್ರೋ ಮಾರ್ಗದ ನಿಲ್ದಾಣಗಳಿವು..
ಮೆಟ್ರೋ ರೈಲು ಸುರಕ್ಷತಾ ಕಮಿಷನರ್ (CMRS) ರೈಲು ಕಾರಿಡಾರ್ನ್ನು ಮೇ ತಿಂಗಳಲ್ಲಿ ಪರಿಶೀಲಿಸಲಿದ್ದಾರೆ. ಬಳಿಕ, BMRCL ಮೆಟ್ರೋ ಸೇವೆಯನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ನಡುವಿನ ಪ್ರಯಾಣದ ಸಮಯ 15 ನಿಮಿಷ ಆಗಿರಲಿದೆ. ಈ ವಿಸ್ತೃತ ರಸ್ತೆಯು ಏಳು ನಿಲ್ದಾಣಗಳನ್ನು ಹೊಂದಿರಲಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ, ಕೆಂಗೇರಿ ಹಾಗೂ ಚಲ್ಲಘಟ್ಟ ನಿಲ್ದಾಣಗಳನ್ನು ಗುರುತಿಸಲಾಗಿದೆ.
ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ಜ್ಞಾನಭಾರತಿ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇರಲಿದೆ. ಕೆಂಗೇರಿ ಬಸ್ ನಿಲ್ದಾಣ ಸಮೀಪದ ಮೆಟ್ರೋ ಸ್ಟೇಷನ್ನಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸೌಲಭ್ಯ ಇರಲಿದೆ. ಎಲ್ಲಾ ನಿಲ್ದಾಣಗಳಲ್ಲೂ ಸೋಲಾರ್ ಪ್ಯಾನೆಲ್ಗಳನ್ನು ಅಳವಡಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ.
ಮೆಟ್ರೋ ರೈಲು ಮಾರ್ಗ ಅಥವಾ ನಿಲ್ದಾಣದ ಕೆಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರಿಕೆ ಆಗುವುದನ್ನು ತಡೆಗಟ್ಟಲು ವಾಟರ್ಪ್ರೂಫಿಂಗ್ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ. ಚಿಕ್ಕಪೇಟೆ ಮತ್ತು ಕೆಆರ್ ಮಾರ್ಕೆಟ್ ಸ್ಟೇಷನ್ಗಳಲ್ಲಿ ₹ 71 ಲಕ್ಷ ಮೌಲ್ಯದ ವಾಟರ್ಪ್ರೂಫಿಂಗ್ ಕೆಲಸ ಆಗಲಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾ.21ರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಮೆಜೆಸ್ಟಿಕ್ನಿಂದ ನಾಯಂಡಹಳ್ಳಿವರೆಗೆ ಸೇವೆ ಸ್ಥಗಿತ
Published On - 4:14 pm, Mon, 22 March 21