Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ; ದಶಪಥ ಹೆದ್ದಾರಿಯ ವಿಶೇಷಗಳಿವು
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ (Bengaluru-Mysuru Expressway) ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಾರ್ಪಣೆಗೊಳಿಸಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ದಶಪಥ ಹೆದ್ದಾರಿ ಬಗ್ಗೆ ತಿಳಿಯಲೇಬೇಕಾದ ಕೆಲವು ಮಾಹಿತಿ ಇಲ್ಲಿ ನೀಡಲಾಗಿದೆ.
Updated on: Mar 11, 2023 | 10:24 PM

ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟ್ಟದಿಂದ ಮೈಸೂರನ್ನು ಸಂಪರ್ಕಿಸುವ 117 ಕಿಲೋಮೀಟರ್ ಉದ್ದದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ, ಎನ್ಎಚ್ 275 ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣಕ್ಕೆ 8,408 ಕೋಟಿ ರೂ. ವ್ಯಯಿಸಲಾಗಿದೆ.

ಎಕ್ಸ್ಪ್ರೆಸ್ ವೇಯ ಆರು ಲೇನ್ಗಳನ್ನು ಮುಖ್ಯ ಲೇನ್ಗಳೆಂದು ಪರಿಗಣಿಸಲಾಗುತ್ತದೆ. ಎರಡೂ ಬದಿಯಲ್ಲಿ 2+2 ಲೇನ್ನ ಸರ್ವೀಸ್ ರಸ್ತೆ ಇರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ನಿತಿನ್ ಗಡ್ಕರಿ ಹೆದ್ದಾರಿ ಇತ್ತೀಚೆಗೆ ತಿಳಿಸಿದ್ದಾರೆ.

ತಜ್ಞರು ಹೇಳುವ ಪ್ರಕಾರ, ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ 10 ಲೇನ್ಗಳದ್ದಾದರೂ 6 ಲೇನ್ಗಳನ್ನು ಪ್ರಮುಖ ಲೇನ್ಗಳೆಂದು ಪರಿಗಣಿಸಲಾಗುತ್ತದೆ. ಉಳಿದ ನಾಲ್ಕನ್ನು (ಎರಡೂ ಬದಿಯ ತಲಾ 2 ಲೇನ್) ಸರ್ವೀಸ್ ರಸ್ತೆ ಎಂದೇ ಪರಿಗಣಿಸಲಾಗುತ್ತದೆ.

ಎಕ್ಸ್ಪ್ರೆಸ್ ವೇ ಸಂಪೂರ್ಣವಾಗಿ ಕಾರ್ಯಾಚರಣೆಗೆ ತೆರೆದುಕೊಂಡ ಬಳಿಕ ಬೆಂಗಳೂರು ಮೈಸೂರು ನಡುವಣ ಪ್ರಯಾಣದ ಸಮಯ 3.5 ಗಂಟೆಯಿಂದ 1.5 ಗಂಟೆಗೆ ಇಳಿಕೆಯಾಗಲಿದೆ. ಒಂದೂ ಕಾಲು ಗಂಟೆಯಲ್ಲೇ ಪ್ರಯಾಣಿಸಬಹುದು ಎಂದೂ ಕೆಲವು ಮೂಲಗಳು ಹೇಳಿವೆ.

8 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 64 ಅಂಡರ್ ಪಾಸ್ಗಳನ್ನು ದಶಪಥ ಹೆದ್ದಾರಿ ಒಳಗೊಂಡಿದೆ.

1 ಓವರ್ ಪಾಸ್, 4 ರೈಲ್ವೆ ಮೇಲ್ಸೇತುವೆಗಳು, 5 ಬೈಪಾಸ್ಗಳನ್ನು (ಮಂಡ್ಯ, ಮದ್ದೂರು, ರಾಮನಗರ, ಚನ್ನಪಟ್ಣ, ಬಿಡಡಿ) ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಮತ್ತು ಸುಗಮ ಸಂಚಾರದ ದೃಷ್ಟುಯಿಂದ ನಿರ್ಮಾಣ ಮಾಡಲಾಗಿದೆ.

ಬೆಂಗಳೂರು ಮೈಸೂರಿನ ನಡುವಣ ಸಂಪರ್ಕದ ದೃಷ್ಟಿಯಿಂದ ಎಕ್ಸ್ಪ್ರೆಸ್ ವೇ ಮಹತ್ವದ್ದಾಗಿದೆ. ಅದೇ ರೀತಿ ಊಟಿ, ಕೇರಳ, ಕೊಡಗು ಪ್ರದೇಶಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿಯೂ ಪ್ರಮುಖವಾದದ್ದಾಗಿದೆ. ಅದೇ ರೀತಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದಲೂ ಪ್ರಮುಖವಾದದ್ದಾಗಿದೆ ಎಂದು ಸರ್ಕಾರ ಹೇಳಿದೆ.




