Bangalore: ನಿಮಗಿದು ಗೊತ್ತೇ?; 55 ವರ್ಷದ ಹಿಂದೆ ಸಂಚಾರ ಶುರು ಮಾಡಿದ ಕರ್ನಾಟಕದ ಮೊದಲ ಸ್ಲೀಪರ್ ಬಸ್ ಹೀಗಿತ್ತು
ಅದು 1966ರ ಸಮಯ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್ಗಳ ಸಂಚಾರವನ್ನು ಆರಂಭಿಸಲಾಯಿತು.
ಬೆಂಗಳೂರು: ಬಸ್ನಲ್ಲಿ ಬಹಳ ದೂರದ ಪ್ರಯಾಣ ಮಾಡುವವರಿಗೆ ಹಾಗೂ ರಾತ್ರಿ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿ ಎಂದು ಸರ್ಕಾರದಿಂದ ಸ್ಲೀಪರ್ ಕೋಚ್ ಬಸ್ಗಳ ಸೇವೆಯನ್ನು ಪರಿಚಯಿಸಲಾಗಿತ್ತು. ಈಗ ಕೆಎಸ್ಆರ್ಟಿಸಿ ಹಾಗೂ ಖಾಸಗಿಯಲ್ಲಿ ಸ್ಲೀಪರ್ ಬಸ್ಗಳು ಸಾಮಾನ್ಯ. ಆದರೆ, ಈ ಆರಾಮದಾಯಕ ಬಸ್ಗಳು ಕರ್ನಾಟಕದಲ್ಲಿ ಸಂಚರಿಸಲು ಶುರುವಾಗಿದ್ದು ಯಾವಾಗ? ಹೇಗೆ? ಎಂಬ ಬಗ್ಗೆ ನಿಮಗೆ ಗೊತ್ತಾ? ಕರ್ನಾಟಕದಲ್ಲಿ ಸ್ಲೀಪರ್ ಬಸ್ಗಳು ಓಡಾಡಲು ತೊಡಗಿ 55 ವರ್ಷಗಳು ಆಗಿವೆ.
ಅದು 1966ರ ಸಮಯ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷವಾದ ಸ್ಪೀಪರ್ ಬಸ್ಗಳ ಸಂಚಾರವನ್ನು ಆರಂಭಿಸಲಾಯಿತು. ಬೆಂಗಳೂರಿನಿಂದ ಹುಬ್ಬಳ್ಳಿಗೆ 55 ವರ್ಷಗಳ ಹಿಂದೆ ಸ್ಲೀಪರ್ ಬಸ್ ಸಂಚಾರವನ್ನು ಶುರು ಮಾಡಲಾಯಿತು. ಬಸ್ನಲ್ಲಿ ಮಲಗಿಕೊಂಡು ಹೋಗಬಹುದು ಎಂಬ ಕಲ್ಪನೆಯೇ ಬಹಳ ಹೊಸದಾಗಿತ್ತು. ಹೀಗಾಗಿ, ಈ ಹೊಸ ರೂಪದ ಬಸ್ ಅನ್ನು ನೋಡಲು ಶಾಂತಿನಗರ ಬಸ್ ನಿಲ್ದಾಣಕ್ಕೆ ನೂರಾರು ಜನರು ಸೇರಿದ್ದರು. ಬೆಡ್ಗಳಿದ್ದ ಬಸ್ ಅನ್ನು ನೋಡಿ ಜನರು ಪುಳಕಿತರಾಗಿದ್ದರು. ಆ ಬಸ್ನಲ್ಲಿ ಫ್ಯಾನ್, ರೇಡಿಯೋ ಹಾಗೇ ರೆಕಾರ್ಡ್ ಪ್ಲೇಯರ್ ಮತ್ತು ಟೆಲಿಫೋನ್ ಕೂಡ ಇತ್ತು.
ರಸ್ತೆ ಮೇಲೆ ರೈಲಿನ ರೀತಿಯಲ್ಲಿ ಬ್ಯುಸಿನೆಸ್ ಕ್ಲಾಸ್ನ ಬಸ್ ಸಂಚಾರ ಆರಂಭಿಸಿ 55 ವರ್ಷಗಳಾಯಿತು. ಕರ್ನಾಟಕದಲ್ಲಿ ಸಂಚಾರ ಶುರು ಮಾಡಿದ ಮೊದಲ ಸ್ಲೀಪರ್ ಬಸ್ ಇದು. 55 ವರ್ಷಗಳ ಹಿಂದೆ 8 ವರ್ಷದವರಾಗಿದ್ದ ನಿಖಿಲ್ ತಿವಾರಿ ತಮ್ಮ ಅಪ್ಪನೊಂದಿಗೆ ಮೊದಲ ಸ್ಲೀಪರ್ ಬಸ್ನಲ್ಲಿ ಪ್ರಯಾಣ ಮಾಡಿದ್ದರು. ಅವರು ಅಂದಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಾವು ಆ ದೊಡ್ಡ ಬಸ್ ಅನ್ನು ಹತ್ತಿದಾಗ ಬಹಳ ಆಶ್ಚರ್ಯವಾಗಿತ್ತು. ತಿಳಿ ನೀಲಿ ಮತ್ತು ಕೆಂಪು ಬಣ್ಣದಲ್ಲಿದ್ದ ಬಸ್ನ ಒಳಭಾಗ ಇನ್ನೂ ನನಗೆ ನೆನಪಿದೆ. ಆ ಬಸ್ನ ಸಿಬ್ಬಂದಿ ಬೆಡ್ ದಿಂಬು, ಲೈಟ್ ಮತ್ತು ರೇಡಿಯೋ ವ್ಯವಸ್ಥೆ ಮಾಡಿದ್ದರು. ಆ ಬಸ್ನ ಫೋಟೋ, ವಿಡಿಯೋವನ್ನು ನನ್ನ ತಂದೆ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು ಎಂದು ನಿಖಿಲ್ ತಿವಾರಿ 55 ವರ್ಷ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಟಿಸಿ)ಯ ಮಹತ್ವದ ಯೋಜನೆಯಾದ ಸ್ಲೀಪರ್ ಬಸ್ ಬಹಳ ಯಶಸ್ವಿಯಾಯಿತು. ಈ ಸ್ಲೀಪರ್ ಬಸ್ನ ಬಗ್ಗೆ ತಿಳಿದುಕೊಳ್ಳಲು, ಅಧ್ಯಯನ ಮಾಡಲು ಕಣ್ಣಪ್ಪ ಎಂಬ ಸಿಬ್ಬಂದಿಯನ್ನು ಎಂಎಸ್ಆರ್ಟಿಸಿಯಿಂದ ಜರ್ಮನಿಗೆ ಕಳುಹಿಸಲಾಗಿತ್ತು. ಅಲ್ಲಿನ ಬಸ್ಗಳ ಸಂಚಾರ, ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಬಂದು ಕರ್ನಾಟಕದಲ್ಲೂ ಅಳವಡಿಸಲಾಯಿತು. ಇದಕ್ಕಾಗಿ ವಿಶೇಷವಾಗಿ ತರಬೇತಿ ಪಡೆದ ಚಾಲಕರು, ಕಂಡಕ್ಟರ್ ಅನ್ನು ನೇಮಕ ಮಾಡಲಾಗಿತ್ತು. ಅದಾದ ಬಳಿಕ ಹಲವು ಬದಲಾವಣೆಗಳೊಂದಿಗೆ ಸ್ಲೀಪರ್ ಬಸ್ ಅನ್ನು ಮೇಲ್ದರ್ಜೆಗೆ ಏರಿಸಲಾಯಿತು. ಇದೀಗ ರಾಜ್ಯಾದ್ಯಂತ ಸಾಕಷ್ಟು ಸ್ಲೀಪರ್ ಬಸ್ಗಳು ಓಡಾಡುತ್ತಿವೆ.
ಇದನ್ನೂ ಓದಿ: ಬೆಂಗಳೂರು: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಕಟ್ಟಡ ಮಾಲೀಕನ ವಿರುದ್ಧ ಎಫ್ಐಆರ್ ದಾಖಲು
(Bengaluru News: 55 years ago Karnataka’s First Sleeper bus started Traveling)
Published On - 6:36 pm, Mon, 27 September 21