ಒಬಾಮ ಭೇಟಿ ವೇಳೆ ಸ್ಫೋಟಕ್ಕೆ ಸಂಚು ಹೂಡಿದ್ದ ಐಎಂ ಉಗ್ರರ ವಿರುದ್ಧ ಬೆಂಗಳೂರು ಎನ್ಐಎ ಕೋರ್ಟ್ ಮಹತ್ವದ ತೀರ್ಪು
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಪಾಕಿಸ್ತಾನದ ಸೂಚನೆಯಂತೆ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ್ದ ಭಟ್ಕಳ ಮೂಲದ ಮೂವರು ಉಗ್ರರನ್ನು ದೋಷಿ ಎಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಿದೆ.
ಬೆಂಗಳೂರು, ಡಿಸೆಂಬರ್ 18: ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿ 2015ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಮೂವರು ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರರನ್ನು ದೋಷಿ ಎಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಉಗ್ರರು ಪಾಕಿಸ್ತಾನದಿಂದ ಬಂದ ಸೂಚನೆಯಂತೆ ಸ್ಫೋಟಕ್ಕೆ ಸಂಚು ಹೂಡಿದ್ದರು.
ಭಟ್ಕಳದ ನಿವಾಸಿಗಳಾದ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸುಬೈರ್ ಮತ್ತು ಸದ್ದಾಂ ಹುಸೇನ್ ಐಪಿಸಿಯ ವಿವಿಧ ಸೆಕ್ಷನ್ಗಳು, ಕಾನೂನುಬಾಹಿರ ಚಟುವಟಿಕೆಗಳು ತಡೆ ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ದೋಷಿಗಳು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ಪೈಕಿ ಅಫಾಕ್ ಪಾಕಿಸ್ತಾನದ ಕರಾಚಿಯ ಅರ್ಸಾಲಾ ಅಬೀರ್ ಅನ್ನು ವಿವಾಹವಾಗಿದ್ದ.
ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
ಸ್ಫೋಟ ಸಂಚಿನ ಕುರಿತು 2015ರಲ್ಲಿ ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕೇಂದ್ರ ಅಪರಾಧ ವಿಭಾಗದ ಎಸಿಪಿ ತಮ್ಮಯ್ಯ ಎಂಕೆ, ಆಗಿನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಂ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎಸ್ಪಿಪಿ ಶಂಕರ ಬಿಕ್ಕಣ್ಣನವರ್ ಪ್ರಾಸಿಕ್ಯೂಷನ್ ನೇತೃತ್ವ ವಹಿಸಿದ್ದರು.
ಶಿಕ್ಷೆಯ ಪ್ರಮಾಣ ಇಂದು ಪ್ರಕಟ
ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಎನ್ಐಎ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಪ್ರಕರಣದಲ್ಲಿ ಭಟ್ಕಳದ ರಿಯಾಜ್ ಅಹಮದ್ ಸಯೀದಿ ಮತ್ತು ಜೈನುಲ್ಲಾಬುದ್ದೀನ್ ಅವರನ್ನು ಖುಲಾಸೆಗೊಳಿಸಲಾಗಿದೆ. ಇತರ ಆರೋಪಿಗಳಾದ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಲಿಫ್ ಮತ್ತು ಸಮೀರ್ ತಲೆಮರೆಸಿಕೊಂಡಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಪೊಲೀಸ್ ತಂಡವು ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸಿದಾಗ ಸ್ಫೋಟಕಗಳನ್ನು ಸಂಗ್ರಹಿಸಲಾಗುತ್ತಿರುವುದು ತಿಳಿದುಬಂದಿತ್ತು. ನಂತರ ಉಗ್ರರನ್ನು ಬಂಧಿಸಿ ಡಿಟೋನೇಟರ್‌ಗಳು, ಜಿಲಾಟಿನ್ ಸ್ಟಿಕ್‌ಗಳು, ಪೈಪ್ ಬಾಂಬ್‌ಗಳು, ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್‌ಗಳು, ಟೈಮರ್‌ಗಳು, ಗನ್‌ಪೌಡರ್ ಮತ್ತು ಬಾಂಬ್‌ಗಳಲ್ಲಿ ಬಳಸಲಾದ ಇತರ ವಸ್ತುಗಳು ಮತ್ತು ಯುಎಇಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ತಿರುಪತಿ ಪಾಸ್ ಕೊಡಿಸಲು ಕರ್ನಾಟಕ ಗೃಹ ಸಚಿವರ ಹೆಸರಲ್ಲಿ ಆಂಧ್ರ ಸಿಎಂ ಕಚೇರಿ ಅಧಿಕಾರಿಗಳಿಗೇ ಬ್ಲ್ಯಾಕ್ಮೇಲ್! ವ್ಯಕ್ತಿಯ ಬಂಧನ
ಮತ್ತೋರ್ವ ಶಂಕಿತ ರಿಯಾಜ್ ಅಹಮದ್ ಸಯೀದಿ ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ