Bengaluru: ಬೆಂಗಳೂರಿನಲ್ಲಿ ವಾಲಿದ 3 ಅಂತಸ್ತಿನ ಕಟ್ಟಡ; ಹಲವು ಕುಟುಂಬಗಳ ಸ್ಥಳಾಂತರ

ಮಂಗಳವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರಿನ ವೃಷಭಾವತಿ ನಗರದ 3 ಅಂತಸ್ತಿನ ಕಟ್ಟಡ ಒಂದೆಡೆ ವಾಲಿದೆ. ಈ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿ ವಾಸವಾಗಿದ್ದ ಕುಟುಂಬಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.

Bengaluru: ಬೆಂಗಳೂರಿನಲ್ಲಿ ವಾಲಿದ 3 ಅಂತಸ್ತಿನ ಕಟ್ಟಡ; ಹಲವು ಕುಟುಂಬಗಳ ಸ್ಥಳಾಂತರ
ಬೆಂಗಳೂರಿನಲ್ಲಿ ವಾಲಿದ ಕಟ್ಟಡ
Updated By: ಸುಷ್ಮಾ ಚಕ್ರೆ

Updated on: Oct 13, 2021 | 3:24 PM

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಉಕ್ಕಿ ಹರಿಯುತ್ತಿರುವ ಚರಂಡಿ, ರಾಜಕಾಲುವೆ, ರಸ್ತೆಗಳ ಹೊಂಡದಲ್ಲಿ ನಿಂತ ನೀರು, ಬೆಂಗಳೂರಿನ ಹಲವೆಡೆ ಮುರಿದು ಬಿದ್ದ ಮರಗಳನ್ನು ತೆರವು ಮಾಡಲು ಬಿಬಿಎಂಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಮಳೆಯಿಂದ ಶಿಥಿಲಗೊಂಡು ಮತ್ತೊಂದು ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ವೃಷಭಾವತಿ ನಗರದಲ್ಲಿ 3 ಅಂತಸ್ತಿನ ಕಟ್ಟಡವೊಂದು ಕುಸಿಯುವ ಹಂತದಲ್ಲಿದೆ.

ಮಂಗಳವಾರ ರಾತ್ರಿ ಸುರಿದ ಮಳೆಗೆ ಈ 3 ಅಂತಸ್ತಿನ ಕಟ್ಟಡ ಒಂದೆಡೆ ವಾಲಿದೆ. ಈ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿ ವಾಸವಾಗಿದ್ದ ಕುಟುಂಬಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ವಾಸವಾಗಿದ್ದ ಜನರಿಗೆ ಸರ್ಕಾರದಿಂದಲೇ ನೆರವು ನೀಡಲಾಗಿದೆ. ಶಿಥಿಲಗೊಂಡಿದ್ದ ಕಟ್ಟಡದಲ್ಲಿ ವಾಸವಾಗಿದ್ದ ಜನರನ್ನು ರಾತ್ರಿಯೇ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಹಾಗೇ, ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಕಪಕ್ಕದ ಮನೆಗಳ ಜನರನ್ನು ಕೂಡ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.

ಇಂದು ಬೆಳಗ್ಗೆ ಸಚಿವ ಕೆ. ಗೋಪಾಲಯ್ಯ ವೃಷಭಾವತಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಅವರು ಆ ಕಟ್ಟಡದಲ್ಲಿ ವಾಸವಾಗಿದ್ದವರು ಮತ್ತು ಅಕ್ಕಪಕ್ಕದ ಮನೆಯವರಿಗೆ ವಸತಿ, ಊಟದ ವ್ಯಸ್ಥೆ ಕಲ್ಪಿಸಲು ಸೂಚಿಸಿದ್ದಾರೆ.

ಆ ಮನೆಯ ಮಾಲೀಕರು ನಾಪತ್ತೆಯಾಗಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕಟ್ಟಡವು ವೃಷಭಾವತಿ ನಗರದಲ್ಲಿದ್ದು, ಈ ಕಟ್ಟಡದ ಅಡಿಪಾಯ ನೀರಿನಲ್ಲಿ ಮುಳುಗಿರುವುದರಿಂದ ಒಂದು ಭಾಗ ಕುಸಿದಿದೆ ಎನ್ನಲಾಗಿದೆ. ಈ ಕಟ್ಟಡದ ಪಕ್ಕದ ಜಾಗವನ್ನು ಕೂಡ ಅಗೆದಿರುವುದರಿಂದಲೂ ಈ ರೀತಿ ವಾಲಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಜಯನಗರ, ವೈಟ್​ಫೀಲ್ಡ್, ರಾಜಾಜಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Bengaluru: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಾಂಗ್ರೆಸ್ ಶಾಸಕರ ಸಂಬಂಧಿ ಬ್ಯಾಗ್​ನಲ್ಲಿ 2 ಜೀವಂತ ಬುಲೆಟ್ ಪತ್ತೆ

Published On - 3:20 pm, Wed, 13 October 21