
ಬೆಂಗಳೂರು, ಸೆಪ್ಟೆಂಬರ್ 21: ಸದ್ಯ ರಾಜ್ಯದಲ್ಲಿ ಬೆಂಗಳೂರು ರಸ್ತೆ (Pothole) ಗುಂಡಿ ವಿಚಾರ ಸಾಕಷ್ಟು ಸುದ್ದು ಮಾಡುತ್ತಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಐಟಿ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಜನರು ಕೂಡ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯನವರೇ (Siddaramaiah) ಅಖಾಡಕ್ಕೆ ಇಳಿದಿದ್ದಾರೆ. ಶನಿವಾರ ಸಭೆ ಮಾಡಿದ ಸಿಎಂ ಅಧಿಕಾರಿಗಳು, ಇಂಜಿನಿಯರ್ಗಳನ್ನು ಜಾಡಿಸಿದರು. ಜೊತೆಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಿದ್ದಾರೆ.
‘ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ? ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ? ಪ್ರತಿ ವಾರ್ಡ್ನ ಎಂಜಿನಿಯರ್ಗಳು, ಮುಖ್ಯ ಎಂಜಿನಿಯರ್ಗಳು ಏನು ಮಾಡುತ್ತಿದ್ದಾರೆ? ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆಗಳನ್ನು ಸಂಚಾರಯೋಗ್ಯ ಮಾಡಲೇಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ ಮತ್ತು ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮವಹಿಸಿ ಎಂದಿದ್ದಾರೆ.
ಬೆಂಗಳೂರು ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ @siddaramaiah ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ, ಸೂಚನೆಗಳನ್ನು ನೀಡಿದರು.
ಸಭೆಯ ಮುಖ್ಯಾಂಶಗಳು ಹೀಗಿವೆ:* ರಸ್ತೆ ಗುಂಡಿಗಳಿಂದ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದರೂ ಈ ವರೆಗೆ ಗುಂಡಿ… pic.twitter.com/vttZseQ3fn
— CM of Karnataka (@CMofKarnataka) September 20, 2025
ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ? ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಇದರ ಮೇಲೆ ನಿಗಾ ಇರಿಸಬೇಕು. ಬಿಡಿಎ, ಬಿಎಂಆರ್ ಸಿಎಲ್, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯವೇ ಇರುವುದಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು ಎಂದು ಹೇಳಿದ್ದಾರೆ.
ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ ಐದೂ ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು. ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಆದ್ಯತೆ ಮೇರೆಗೆ ಕ್ರಮ ವಹಿಸಿ. ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು’ ಎಂದು ಮುಖ್ಯಮಂತ್ರಿಗಳು ಖಡಕ್ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ ಬೆಂಗಳೂರು ರಸ್ತೆ ಗುಂಡಿ, ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಮತ್ತಷ್ಟು ಅವ್ಯವಸ್ಥೆ