ಬೆಂಗಳೂರು ಗ್ರಾಮಾಂತರ: ಬೀದಿ ನಾಯಿಯನ್ನ ತಪ್ಪಿಸಲು ಹೋಗಿ ಲಾರಿಗೆ ಬೈಕ್ ಡಿಕ್ಕಿ; ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವು

ಆಕೆ ಆರು ತಿಂಗಳಿಂದಷ್ಟೆ ವಿವಾಹವಾಗಿದ್ದ ನವ ವಿವಾಹಿತೆ, ಜೊತೆಗೆ ತಾನು ಸಹ ತಾಯಿ ಆಗುತ್ತಿರುವ ಖುಷಿಯಲ್ಲಿದ್ದು, ಅತ್ತೆ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದರು. ಆದ್ರೆ, ಈ ವೇಳೆ ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದ ಬೀದಿ ನಾಯಿ ಆಕೆಯ ಜೀವಕ್ಕೆ ಕೊಳ್ಳಿಯಿಟ್ಟಿದ್ದು, ನಾಯಿಯ ಜೀವ ಉಳಿಸಲು ಹೋಗಿ ತನ್ನ ಜೀವವನ್ನು ಬಲಿ ನೀಡಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಬೆಂಗಳೂರು ಗ್ರಾಮಾಂತರ: ಬೀದಿ ನಾಯಿಯನ್ನ ತಪ್ಪಿಸಲು ಹೋಗಿ ಲಾರಿಗೆ ಬೈಕ್ ಡಿಕ್ಕಿ; ಗರ್ಭಿಣಿ ಮಹಿಳೆ ಸ್ಥಳದಲ್ಲೇ ಸಾವು
ಪ್ರಾತಿನಿಧಿಕ ಚಿತ್ರ
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 09, 2023 | 10:36 PM

ಬೆಂಗಳೂರು ಗ್ರಾಮಾಂತರ, ಸೆ.09: ನಾಯಿ ಜೀವ ಉಳಿಸಲು ಹೋಗಿ ಬೈಕ್ ಲಾರಿಗೆ ಡಿಕ್ಕಿ (Accident) ಹೊಡೆದಿದ್ದು, ಗರ್ಭೀಣಿ ಮಹಿಳೆ ಸಾವನ್ನಪ್ಪಿದ್ದಾಳೆ. ಹೌದು, ಇಲ್ಲಿ ನೆತ್ತರು ಹರಿದು ಬೀದಿ ನಾಯಿ ಜೀವ ಉಳಿಸಿ ತನ್ನ ಜೀವವನ್ನ ಬಲಿ ನೀಡಿರುವ ಮಹಿಳೆಯ ಹೆಸರು ನಂದಿನಿ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ನಗರದ ಕರೇನಹಳ್ಳಿ ನಿವಾಸಿಯಾದ ಇವರು, ಇಂದು ಮದ್ಯಾಹ್ನ ಅತ್ತೆ ಹಾಗೂ ನಾದಿನಿಯ ಮಗು ಜೊತೆ ಪಟ್ಟಣದ ಮುಖ್ಯ ರಸ್ತೆಯತ್ತ ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ನಂದಿನಿಯ ದ್ವಿಚಕ್ರ ವಾಹನಕ್ಕೆ ಬೀದಿ ನಾಯಿಯೊಂದು ಏಕಾಏಕಿ ಅಡ್ಡ ಬಂದಿದ್ದು, ನಾಯಿಯನ್ನು ತಪ್ಪಿಸಲು ನಂದಿನಿ ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ಬೈಕ್ ನಂದಿನಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಎದುರಿಗೆ ಬರ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ನಂದಿನಿ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸಾವ್ರದಿಂದ ಸಾವನ್ನಪಿದ್ದಾಳೆ.

ಬೈಕ್ ಲಾರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಬೈಕ್ ಸಮೇತ ಲಾರಿ ನಂದಿನಿಯನ್ನು ನೂರು ಮಿಟರ್ ಎಳೆದೋಗಿದ್ದು, ಅದೃಷ್ಟವಶಾತ್ ಬೈಕ್​ನಲ್ಲಿದ್ದ ನಂದಿನಿಯ ಅತ್ತೆ ಹಾಗೂ ಮೂರು ವರ್ಷದ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಗಾಯಗೊಂಡಿದ್ದ ಮಗು ಮತ್ತು ಅತ್ತೆಯನ್ನು ಸ್ಥಳಿಯರು ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಮೃತ ನಂದಿನಿ ಆರು ತಿಂಗಳಿಂದಷ್ಟೆ ಮದುವೆಯಾಗಿದ್ದು, ಗರ್ಭಿಣಿ ಸಹ ಆಗಿದ್ದಳಂತೆ. ಆದ್ರೆ, ಅಷ್ಟರಲ್ಲೆ ಇಂತಹ ದುರ್ಘಟನೆಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಚಿತ್ರದುರ್ಗ: ಸ್ನೇಹಿತನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಪ್ರಯತ್ನ; ಆರೋಪಿಗಳು ಸಿಕ್ಕಿಬಿದ್ದಿದ್ದೆ ರೋಚಕ

ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು

ಜೊತೆಗೆ ಸಾವಿನ ನೋವಿನಲ್ಲೂ ನಂದಿನಿಯ ಕಣ್ಣುಗಳನ್ನು ದಾನ ಮಾಡಿ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಇನ್ನು ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಾವಳಿಯಿಂದ ಅಮಾಯಕರು ಜೀವ ಬಲಿಯಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದ ಆಕ್ರೋಶ ಹೊರ ಹಾಕಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ನಾಯಿಯನ್ನು ತಪ್ಪಿಸಲು ಹೋಗಿ ಗರ್ಭಿಣಿ ಮಹಿಳೆ ಬಲಿಯಾಗಿದ್ದು, ಮಾತ್ರ ನಿಜಕ್ಕೂ ದುರಂತ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ