ಸಿದ್ದರಾಮಯ್ಯ ದುರಾಡಳಿತದಿಂದ 125 ಶಾಸಕರಿದ್ದ ಕಾಂಗ್ರೆಸ್ ಪಕ್ಷವನ್ನು 75ಕ್ಕೆ ತಂದು ನಿಲ್ಲಿಸಿದ್ರು: ಆರ್ ಅಶೋಕ್ ವಾಗ್ದಾಳಿ
R Ashok: ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಆಗಮಿಸಿದ ವೇಳೆ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದೆ. ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನು ಅಭಿವೃದ್ಧಿ ಮಾಡಿದ್ದಾರೆಂದು ಕೇಳ್ತಾರೆ. ಹೀಗೆ ಕೇಳುವ ಸಿದ್ದರಾಮಯ್ಯ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿ 60 ತಿಂಗಳು ಅಧಿಕಾರ ನಡೆಸಿದ್ರು. 125 ಶಾಸಕರಿದ್ದ ಕಾಂಗ್ರೆಸ್ ಪಕ್ಷವನ್ನು 75ಕ್ಕೆ ತಂದು ನಿಲ್ಲಿಸಿದ್ರು. ಸಿದ್ದರಾಮಯ್ಯ ದುರಾಡಳಿತದಿಂದ 55 ಶಾಸಕರು ಸೋತಿದ್ದರು. ಗೆದ್ದಿದ್ದ ಶಾಸಕರಲ್ಲಿಯೂ 12 ಜನರು ಬಿಟ್ಟು ಹೋದರು. ಸಿದ್ದರಾಮಯ್ಯ ದುರಾಡಳಿತ, ದಾದಾಗಿರಿಯಿಂದ ಬಿಟ್ಟುಹೋದ್ರು ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೇಸ್ ದೇಶದಲ್ಲೆ ಒಡೆದ ಮನೆ ಆಗಿದೆ. ದೆಹಲಿಯಲ್ಲೂ ಮನೆ ಬಿರುಕಾಗಿದೆ. ಮನೆಯೊಂದು ಮೂರು ಬಾಗಿಲಾಗಿದೆ. ಕರ್ನಾಟಕದಲ್ಲಿ ಮನೆಯೊಂದು ಎರಡು ಬಾಗಿಲು ಆಗಿದೆ. ಅಲ್ಲಿ ಮೂರು ಇಲ್ಲಿ ಎರಡು ಬಾಗಿಲು ಅಷ್ಟೆ ವ್ಯತ್ಯಾಸ. ಪಂಜಾಬ್‌ನಲ್ಲಿ ಸಿಧು, ಕರ್ನಾಟಕದಲ್ಲಿ ಸಿದ್ದು- ಇವರಿಬ್ಬರೂ ಸೇರಿ ಕಾಂಗ್ರೆಸ್‌ಗೆ ತಿಥಿ ಮಾಡಿಬಿಡ್ತಾರೆ ಎಂದು ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಆಗಮಿಸಿದ ವೇಳೆ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದೆ. ಕಾಂಗ್ರೆಸ್ ದುರಾಡಳಿತ ಕೊನೆಗಾಣಿಸಲು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಎಸ್ ಜೆಪಿಯ ಬಿ ಟೀಮ್ ಎಂದು ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಕಾಂಗ್ರೆಸ್ ಮೈತ್ರಿಯಾಗಿದೆ. ಹಿಂದುತ್ವ ವಿಚಾರದಲ್ಲಿ ಬಿಜೆಪಿಗಿಂತ ಶಿವಸೇನೆ ಕಠೋರ. ಹಾಗಾದ್ರೆ ಅಲ್ಲಿ ಹೇಗೆ ಮೈತ್ರಿ ಮಾಡಿಕೊಂಡಿದ್ದೀರೆಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ನಿತೀಶ್ ಬಿಜೆಪಿ ಜೊತೆ 15 ವರ್ಷ ಸರ್ಕಾರ ಮಾಡಿತ್ತಲ್ವಾ ಅವರ ಜೊತೆಯು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು. ನೀವು ಹೊಂದಾಣಿಕೆ ಮಾಡಿಕೊಂಡ್ರೆ ಜಾತ್ಯಾತೀತ, ನಾವು ಮಾಡಿಕೊಂಡ್ರೆ ಕೋಮುವಾದಿಯಾಗುತ್ತಾ? ಕಾಂಗ್ರೆಸ್ ಸಮಯಕ್ಕೆ ಸರಿಯಾಗಿ ಒಂದು ಆಟ ಆಡ್ತಾರೆ ಎಂದು ಆರೋಪಿಸಿದ್ದಾರೆ.
ಈ ಬಾರಿಯ ಉಪ ಚುನಾವಣೆ ಸೋಲುತ್ತಾರೆ. ಹೀಗಾಗಿ ಯತೇಚ್ಚವಾಗಿ ದುಡ್ಡು ಹಂಚುತ್ತಿದ್ದಾರೆ ಎಂದು ಹೇಳಲು ಶುರುಮಾಡಿದ್ದಾರೆ. ಸೋತಮೇಲೆ ಹೇಳಬೇಕಾದ ಡೈಲಾಗ್ ಸೊಲೋದಕ್ಕು ಮುನ್ನವೆ ಟ್ರಯಲ್ ಮಾಡಿಕೊಳ್ತಿದ್ದಾರೆ. ಸಿಂದಗಿಯಲ್ಲಿ ಸ್ಪರ್ಧೆ ಇರೋದು ಬಿಜೆಪಿ ಜೆಡಿಎಸ್ ಮಾತ್ರ. ಕಾಂಗ್ರೆಸ್ ಮೂರನೆ ಸ್ಥಾನಕ್ಕೆ ಹೋಗುತ್ತೆ. ಸುಖಾ ಸುಮ್ಮನೆ ವೈಯುಕ್ತಿಕ ನಿಂದನೆಗಳನ್ನ ಮಾಡ್ತಿದ್ದಾರೆ ಇದರಿಂದ ಪ್ರಯೋಜನವಿಲ್ಲ ಎಂದು ಟೀಕಿಸಿದ್ದಾರೆ.
ಮುಸ್ಲಿಂ ಮತಗಳು ಜೆಡಿಎಸ್‌ನತ್ತ ಹೋಗ್ತಿವೆ ಎಂಬ ಭಯವಿದೆ. ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎನ್ನುತ್ತಿದ್ದಾರೆ. ಮತ ವಿಭಜಿಸಲು ಅಭ್ಯರ್ಥಿ ಹಾಕಿದ್ದಾರೆ ಎಂದು ಹೇಳ್ತಿದ್ದಾರೆ. ಕಾಂಗ್ರೆಸ್‌ನವರು ಕೂಡ ಮುಸ್ಲಿಂ ಅಭ್ಯರ್ಥಿ ಹಾಕಬೇಕಾಗಿತ್ತು. ಕಾಂಗ್ರೆಸ್‌ನವರಿಗೆ ಮುಸ್ಲಿಂ ಅಭ್ಯರ್ಥಿ ಹಾಕುವ ಧೈರ್ಯ ಇಲ್ಲ ಎಂದು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಡಳಿತಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ, ನಗರಸಭೆ ಆಡಳಿತ ನಡೆಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅಧ್ಯಕ್ಷಗಾದಿ ಬಿಜೆಪಿಗೆ ಇಟ್ಟುಕೊಂಡು ಉಪಾಧ್ಯಕ್ಷಗಾದಿಯನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 12 ಸ್ಥಾನ ಗೆದ್ದಿರುವ ಬಿಜೆಪಿ ಏಳು ಸ್ಥಾನ ಪಡೆದಿರುವ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಸ್ವತಃ ದೊಡ್ಡಬಳ್ಳಾಪುರಕ್ಕೆ ಆಗಮಿಸಿರುವ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಜೆಡಿಎಸ್ ಜತೆ ಮಾತುಕತೆ ನಡೆಸಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಮೂರು ಪಕ್ಷಗಳು ಮಾತಿನ ಯುದ್ದದ ಮೂಲಕ ಕಿತ್ತಾಟ ನಡೆಸುತ್ತಿದ್ದರೆ ಇತ್ತ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ; ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳ ಸುರಿಮಳೆ!
ಇದನ್ನೂ ಓದಿ: ಕುಮಾರಸ್ವಾಮಿಗೆ RSS ಗಂಧಗಾಳಿ ಗೊತ್ತಿಲ್ಲ; ಯಾವುದೋ ಒಂದು ಪುಸ್ತಕ ಓದಿ ಅದೇ ಸತ್ಯ ಅಂತಾರೆ: ಆರ್ ಅಶೋಕ್
Published On - 2:35 pm, Tue, 26 October 21