ದೇವನಹಳ್ಳಿ, ಅಕ್ಟೋಬರ್ 16: ಕೇಂದ್ರ ಸರ್ಕಾರ ವಾಯುಮಾಲಿನ್ಯ ಹಾಗೂ ಹಳೆ ವಾಹನಗಳಿಂದಾಗುವ ಅನಾಹುತಗಳನ್ನ ತಪ್ಪಿಸಲು 15 ವರ್ಷದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದೆ. ಹೀಗಾಗಿ ರಾಜ್ಯದಲ್ಲಿ ಲಕ್ಷ ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಾಗದೆ ಮೂಲೆಗುಂಪಾಗಿದ್ದು, ಇದೀಗ ಮೂಲೆ ಗುಂಪಾಗಿರುವ ವಾಹನಗಳಿಗಾಗಿಯೇ ರಾಜ್ಯದ ಮೊದಲ ಸ್ಕ್ರಾಪ್ (scrap) ಕೇಂದ್ರ ಸಿಲಿಕಾನ್ ಸಿಟಿ ಹೊರ ವಲಯ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ರಾಜ್ಯದ ಮೊದಲ ಸ್ಕ್ರಾಪ್ ಘಟಕ ತಲೆ ಎತ್ತಿದೆ.
ಕೇಂದ್ರ ಸರ್ಕಾರ 15 ವರ್ಷಗಳಿಗಿಂತ ಹಳೆಯದಾದ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ಈಗಾಗಲೇ ಬ್ರೇಕ್ ಹಾಕಿದ್ದು, ಅಂತಹ ವಾಹನಗಳನ್ನ ಗುಜುರಿಗೆ ಹಾಕಲು ಆದೇಶಿಸಿದೆ. ಆದರೆ ಈ ಆದೇಶ ಆಗಿ 2 ವರ್ಷ ಕಳೆದರು ನಮ್ಮ ರಾಜ್ಯದಲ್ಲಿ ಮಾತ್ರ ಗುಜುರಿ ಘಟಕ ತಲೆ ಎತ್ತಿರಲಿಲ್ಲ. ಹೀಗಾಗಿ ಇದೀಗ ರಾಜ್ಯದಲ್ಲೇ ಮೊಟ್ಟ ಮೊದಲ ವಾಹನಗಳ ಸ್ಕ್ರಾಪ್ ಘಟಕ ದೇವನಹಳ್ಳಿ ಬಳಿ ತಲೆ ಎತ್ತಿದೆ. ಜೊತೆಗೆ ಕಳೆದೊಂದು ತಿಂಗಳಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 200 ಕ್ಕೂ ಅಧಿಕ ಬೈಕ್ ಹಾಗೂ 200 ಕ್ಕೂ ಅಧಿಕ ಹಳೆಯ ಕಾರುಗಳನ್ನ ಸ್ಕ್ರಾಪ್ ಮಾಡಲಾಗಿದೆ.
ಇದನ್ನೂ ಓದಿ: ಆಪರೇಷನ್ ಅಜಯ್ ಮೂಲಕ ತಾಯ್ನಾಡಿಗೆ ಆಗಮಿಸಿದ 9 ಕನ್ನಡಿಗರು; ಇಸ್ರೇಲ್ ಪರಿಸ್ಥಿತಿ ಬಗ್ಗೆ ಹೇಳಿದ್ದಿಷ್ಟು
ರಾಜ್ಯದಲ್ಲಿ 16 ಲಕ್ಷಕ್ಕೂ ಅಧಿಕ ವಾಹನಗಳು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿದ್ದು ಅವುಗಳೆಲ್ಲ ಸಂಚಾರ ಮಾಡಲಾಗದೆ ನಿಂತಲ್ಲೇ ನಿಂತಿವೆ. ಜೊತೆಗೆ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ 14 ಸಾವಿರಕ್ಕೂ ಅಧಿಕ ವಾಹನಗಳು ಸ್ಕ್ರಾಪ್ಗೆ ರೆಡಿಯಾಗಿದ್ದು, ಅವುಗಳಲ್ಲಿ 9 ಸಾವಿರ ವಾಹನಗಳನ್ನ ಸ್ಕ್ರಾಪ್ ಮಾಡಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಅಂತಹ ವಾಹನಗಳನ್ನೆಲ್ಲ ಮಹೀಂದ್ರ ಸ್ಕ್ರಾಪ್ ಘಟಕದ ಸಿಬ್ಬಂದಿ ತೂಕದ ಆಧಾರದಲ್ಲಿ ಖರೀದಿ ಮಾಡಿ ವಿವಿಧ ಬಾಗಗಳಾಗಿ ವಿಂಗಡನೆ ಮಾಡಲಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೇ ವಾಪಸ್ ಬೆಂಗಳೂರಿಗೆ ಬಂದ ವಿಮಾನ: ಪ್ರಯಾಣಿಕರು ಕಂಗಾಲು
ಅಲ್ಲದೆ ಇದರಲ್ಲಿ ಮರು ನವೀಕರಣ ಹಾಗೂ ಮರು ಬಳಕೆಗೆ ಯೋಗ್ಯವಾದ ವಸ್ತುಗಳನ್ನ ಬೇರ್ಪಡಿಸಿ ಮರು ಬಳಕೆ ಮಾಡಲಿದ್ದು ಇದರಿಂದ ರಾಜ್ಯದಲ್ಲಿ ಹಳೆ ವಾಹನಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಇತರೆ ಅನಾಹುತಗಳ ತಪ್ಪಲಿದೆ ಅಂತ ದೇವನಹಳ್ಳಿಯ ಎಆರ್ಟಿಒ ಶ್ರೀನಿವಾಸಪ್ಪ ತಿಳಿಸಿದ್ದಾರೆ.
ಒಟ್ಟಾರೆ ಲಕ್ಷ ಲಕ್ಷ ವಾಹನಗಳು ಓಡಾಡಕ್ಕೆ ನಿಷೇದವಾಗಿದ್ದರು ಸ್ಕ್ರಾಪ್ ಮಾಡಲು ಸ್ಥಳವಿಲ್ಲದೆ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದ್ದು, ಇದೀಗ ಸಿಲಿಕಾನ್ ಸಿಟಿ ಹೊರ ವಲಯದಲ್ಲೇ ಸ್ಕ್ರಾಪ್ ಘಟಕ ತಲೆ ಎತ್ತಿರುವುದು ಹಳೆ ವಾಹನಗಳಿಗೆ ಮುಕ್ತಿ ನೀಡಲು ಸಹಕಾರವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.