ದುರಂತಗಳು ಸಂಭವಿಸಿದ್ರೂ ಎಚ್ಚೆತ್ತುಕೊಳ್ಳದ ಬಸ್​​ ಮಾಲೀಕರು: ಸ್ಲೀಪರ್ ಕೋಚ್​​​ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್

ಬಸ್ ದುರಂತಗಳ ನಡುವೆಯೂ ಖಾಸಗಿ ಬಸ್‌ಗಳು ಅಕ್ರಮವಾಗಿ ಗೂಡ್ಸ್ ಸಾಗಾಟ ಮುಂದುವರಿಸಿವೆ. ಸಾರಿಗೆ ಇಲಾಖೆಯ ಎಚ್ಚರಿಕೆ ನಿರ್ಲಕ್ಷಿಸಿ, ದೇವನಹಳ್ಳಿ ಬಳಿ ಹೈದರಾಬಾದ್‌ನಿಂದ ಬಂದ ಬಸ್‌ನಲ್ಲಿ ಅತಿಯಾದ ಗೂಡ್ಸ್ ತುಂಬಿದ್ದನ್ನು RTO ಅಧಿಕಾರಿಗಳು ಪತ್ತೆಹಚ್ಚಿ ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ 15ಕ್ಕೂ ಹೆಚ್ಚು ಬಸ್‌ಗಳಿಗೆ ದಂಡ ವಿಧಿಸಿದ್ದಾರೆ.

ದುರಂತಗಳು ಸಂಭವಿಸಿದ್ರೂ ಎಚ್ಚೆತ್ತುಕೊಳ್ಳದ ಬಸ್​​ ಮಾಲೀಕರು: ಸ್ಲೀಪರ್ ಕೋಚ್​​​ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್
ಬಸ್​​ ಸೀಜ್​ ಮಾಡಿರುವ ಅಧಿಕಾರಿ
Edited By:

Updated on: Dec 30, 2025 | 8:55 PM

ದೇವನಹಳ್ಳಿ, ಡಿಸೆಂಬರ್​ 30: ಇತ್ತೀಚೆಗೆ ಹಿರಿಯೂರು ಬಳಿ ಬಸ್ ದುರಂತ ಸಂಭವಿಸಿ ಅಮಾಯಕರು ಜೀವ ಕಳೆದುಕೊಂಡಿದ್ದು, ಸಾರಿಗೆ ಇಲಾಖೆ ಬಸ್​​ಗಳಲ್ಲಿ (Private Buses) ಗೂಡ್ಸ್ (Goods) ಹಾಕದಂತೆ ಎಚ್ಚರಿಕೆ ನೀಡಿತ್ತು. ಆದರೆ ಸಾರಿಗೆ ಇಲಾಖೆ ಎಚ್ಚರಿಕೆ ನಡುವೆಯೂ ಬಸ್ ಸಿಬ್ಬಂದಿ ಮತ್ತೆ ಅದೇ ತಮ್ಮ ಹಳೆ ಚಾಳಿ ಮುಂದುವರೆಸಿದ್ದು, ಬಸ್ ನಲ್ಲಿನ ಲಗೇಜ್ ಕಂಡು ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಟಾಪ್ ಟೂ ಬಾಟಂ ಗೂಡ್ಸ್ ತುಂಬಿಕೊಂಡು ಸಂಚಾರ: ಖಾಸಗಿ ಬಸ್ ಸೀಜ್

ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಾಲು ಸಾಲು ಬಸ್ ದುರಂತಗಳು ಸಂಭವಿಸುತ್ತಿದ್ದು, ಅಮಾಯಕರು ಸಜಿವ ದಹನವಾಗುತ್ತಿದ್ದಾರೆ. ಅಲ್ಲದೆ ಬಸ್ ದುರಂತಗಳಿಂದ ಎಚ್ಚೆತ್ತ ಸಾರಿಗೆ ಇಲಾಖೆ ಬಸ್​​ಗಳಲ್ಲಿ ಪ್ರಯಾಣಿಕರ ಲಗೇಜ್ ಹೊರತು ಪಡಿಸಿ, ಗೂಡ್ಸ್ ತುಂಬದಂತೆ ಎಚ್ಚರಿಕೆ ನೀಡಿತ್ತು. ಆದರೆ ಇಷ್ಟೆಲ್ಲಾ ಅವಾಂತರಗಳನ್ನ ಕಣ್ತುಂಬ ನೋಡಿದರೂ ಇಲಾಖೆ ಅಧಿಕೃತ ಆದೇಶ ಮಾಡಿದರು ನಮ್ಮನ್ಯಾರು ಕೇಳೋರು ಅನ್ನೋ ಧಿಮಾಕಿನಲ್ಲೇ ಇಂದು ಬೆಳಗ್ಗೆ ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದ ಬಸ್​ವೊಂದು​ ಮೇಲೆ ಕೆಳಗೆ ಎಲ್ಲೆಡೆ ಲಗೇಜ್ ತುಂಬಿಕೊಂಡು ಬಂದಿತ್ತು. ಈ ರೀತಿ ಲಗೇಜ್ ಹಾಕುವವರಿಗೆ ಬುದ್ದಿ ಕಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಫೀಲ್ಡಿಗಿಳಿದಿದ್ದ ಆರ್​​ಟಿಓ ಸುದಿಂದ್ರ ಆ್ಯಂಡ್​ ಟೀಂ ಬಸ್ ಅನ್ನ ತಡೆದು ಪರಿಶೀಲನೆ ಮಾಡಿದರು. ಮೆಲ್ನೋಟಕ್ಕೆ ಟಾಪ್​​ನಲ್ಲಿ ಮಾತ್ರ ಲಗೇಜ್ ಹಾಕಿದ್ದಾರೆ ಅಂತ ಬಸ್ ತಡೆದ ಅಧಿಕಾರಿಗಳಿಗೆ ಬಸ್​ನ ಡಿಕ್ಕಿಯಲ್ಲಿ ಮೂಟೆಗಟ್ಟಲೇ ಲಗೇಜ್ ಕಂಡು ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡುವ ಮುನ್ನ ಎಚ್ಚರ

ಬಸ್​ನ ಮೇಲೆ ಮತ್ತು ಡಿಕ್ಕಿಯಲ್ಲಿ ಬಟ್ಟೆ ಮೂಟೆಗಳು ಮತ್ತು ಪೈಂಟ್ ಬಾಕ್ಸ್​ಗಳನ್ನ ತುಂಬಿಕೊಂಡು ಬಂದಿರುವುದು ಕಾಣಿಸುತ್ತಿದ್ದಂತೆ ಅಧಿಕಾರಿಗಳು ಬಸ್ ಅನ್ನ ಸೀಜ್ ಮಾಡಿದ್ದಾರೆ. ಅಲ್ಲದೆ ಸ್ಲೀಪರ್ ಕೋಚ್ ಬಸ್​ಗಳಿಗೆ ಟಾಪ್​​ ಇರಬಾರದು ಅನ್ನೂ ನಿಯಮವಿದ್ದರೂ ಟಾಪ್​ ಮೇಲೆಯೇ ರಾಜಾರೋಷವಾಗಿ ಲಗೇಜ್ ಹಾಕಿಕೊಂಡು ಬಂದಿದ್ದು, ಬಸ್ ಮಾಲೀಕನ ವಿರುದ್ದ ಅಧಿಕಾರಿಗಳು ಕೇಸ್ ಜಡಿದಿದ್ದಾರೆ.

15ಕ್ಕೂ ಹೆಚ್ಚು ಬಸ್​​ಗಳಿಗೆ ದಂಡ

ಇನ್ನು ಇದೇ ರೀತಿ ಬೆಂಗಳೂರಿನಿಂದ ಆಂಧ್ರಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್ ಮೇಲೆ ಹೂಗಳನ್ನ ತುಂಬಿಕೊಂಡು ಹೋಗ್ತಿದ್ದು ಅದನ್ನ ಸಹ ಸೀಜ್ ಮಾಡಿದ್ದಾರೆ. ಇದೇ ರೀತಿ ಸಣ್ಣಪುಟ್ಟ ಓವರ್ ಲಗೇಜ್ ಹಾಕಿದ್ದ 15ಕ್ಕೂ ಹೆಚ್ಚು ಬಸ್​​ಗಳಿಗೆ ಆರ್​​ಟಿಓ ಅಧಿಕಾರಿಗಳು ದಂಡ ಹಾಕುವ ಮೂಲಕ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಫ್ಲೈ ಓವರ್‌ ಮೇಲೆ ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ

ದುರಂತಗಳು ಸಂಭವಿಸದ ಮೇಲೂ ಕೆಲ ಖಾಸಗಿ ಬಸ್ ಮಾಲೀಕರು ಮತ್ತು ಸಿಬ್ಬಂದಿ ಎಚ್ಚೆತ್ತುಕೊಳ್ಳದೆ ಹಣದ ಆಸೆಗೆ ಹಳೆ ಚಾಳಿ ಮುಂದುವರೆಸಿದ್ದಾರೆ. ಈ ರೀತಿ ಜನರ ಜೀವದ ಜೊತೆ ಚೆಲ್ಲಾಟವಾಡುವವರಿಗೆ ಸಾರಿಗೆ ಇಲಾಖೆ ಕೇವಲ ದಂಡ ಹಾಕುವುದು ಮಾತ್ರವಲ್ಲದೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Tue, 30 December 25