
ದೇವನಹಳ್ಳಿ, ಜನವರಿ 30: ಪ್ರೀತಿ, ಮದುವೆ ಎಂಬ ನಾಟಕವಾಡಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ಇದೀಗ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಆರೋಪ ಕೇಳಿಬಂದಿದ್ದು, ಮೊದಲ ಹಾಗೂ ಎರಡನೇ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸುಧಾರಾಣಿ ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಳು ಎನ್ನಲಾಗಿದೆ.
ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ತನ್ನ ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.
ಮೊದಲ ಪತಿಯಿಂದ ದೂರಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬುವವರನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜೊತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.
ಅನಂತಮೂರ್ತಿಯಿಂದ ಹಣ ಪಡೆದ ನಂತರ ಆತನನ್ನೂ ತೊರೆದಿರುವ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಲವಾರು ಯುವತಿಯರ ಜತೆ ಯುವಕನ ಕಾಮಕೇಳಿ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ
ಈಕೆ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ. ಇಂತಹ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಪತಿಯರು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.