ದೇವನಹಳ್ಳಿ: ಹೆಂಡತಿಯ ಮೇಲೆ ಗಂಡನ ರಾಕ್ಷಸಿ ವರ್ತನೆ, ದುಡಿದು ತಿನ್ನುತ್ತಿದ್ದ ಪತ್ನಿಯ ಎರಡೂ ಕೈಗಳನ್ನೇ ಕತ್ತರಿಸಿದ ಪಾಪಿ ಪತಿ
ಕೆಲಸಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗಂಡ ಅಟ್ಟಹಾಸ ಮೆರೆದಿದ್ದಾನೆ. ಮಚ್ಚಿನಿಂದ ಚಂದ್ರಕಲಾಳ ಎರಡು ಕೈಗಳನ್ನು ಕತ್ತರಿಸಿದ್ದಾನೆ.
ದೇವನಹಳ್ಳಿ: ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಪತ್ನಿಯ ಕೈಗಳನ್ನು ಕತ್ತರಿಸಿ ಪತಿ ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನಡೆದಿದೆ. ಪತ್ನಿ ಚಂದ್ರಕಲಾ(45) ಕೈಗಳನ್ನು ಕತ್ತರಿಸಿ ಪತಿ ಮುನಿಕೃಷ್ಣಪ್ಪ ಪೈಶಾಚಿಕ ಕೃತ್ಯ ಎಸಗಿದ್ದಾನೆ.
ಚಂದ್ರಕಲಾ ಮತ್ತು ಮುನಿಕೃಷ್ಣಪ್ಪ ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದರೂ ಮನೆಯಲ್ಲಿ ಪ್ರತಿನಿತ್ಯವೂ ಜಗಳ ನಡೆಯುತ್ತಿತ್ತು. ಜಗಳದಿಂದ ಬೇಸತ್ತು ಮೂರು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಮಕ್ಕಳ ಜೊತೆ ಚಂದ್ರಕಲಾ ಬಾಡಿಗೆ ಮನೆಯಲ್ಲಿದ್ದರು. ತನ್ನ ಮಗಳು ಹಾಗೂ ಚಂದ್ರಕಲಾ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು. ನಿನ್ನೆ ಸಂಜೆ(ಮಾರ್ಚ್ 06) ಕೆಲಸಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗಂಡ ಅಟ್ಟಹಾಸ ಮೆರೆದಿದ್ದಾನೆ. ಮಚ್ಚಿನಿಂದ ಚಂದ್ರಕಲಾಳ ಎರಡು ಕೈಗಳನ್ನು ಕತ್ತರಿಸಿದ್ದಾನೆ. ಹಲ್ಲೆಗೊಳಗಾದ ಚಂದ್ರಕಲಾಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಸ್ತಿ ವಿಚಾರಕ್ಕೆ ಕುಟುಂಬಗಳ ನಡುವೆ ಮಾರಾಮಾರಿ
ತುಮಕೂರು ತಾಲೂಕಿನ ಜನಪನಹಳ್ಳಿ ತಾಂಡಾದಲ್ಲಿ ಆಸ್ತಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿದೆ. 1.24 ಎಕರೆ ಜಮೀನು ಹಂಚಿಕೆ ವಿಚಾರವಾಗಿ ಕುಟುಂಬಸ್ಥರು ಗಲಾಟೆ ಮಾಡಿದ್ದು ಹನುಮಂತರಾಯಪ್ಪ, ಲೋಕೇಶ್, ಭಾಗ್ಯ, ಸುಷ್ಮಾ ಎಂಬುವರಿಂದ ರತ್ನಮ್ಮ, ಪುಟ್ಟಮ್ಮ ಎಂಬುವರ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಲಾಗಿದೆ. ಪುಟ್ಟಮ್ಮ ಸ್ಥಿತಿ ಗಂಭೀರವಾಗಿದ್ದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೆಳೆಯರ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದ ನಿವೃತ್ತ ಪೊಲೀಸ್ ಸಿಬ್ಬಂದಿ ಮೆಜೆಸ್ಟಿಕ್ನಲ್ಲಿ ಶವವಾಗಿ ಪತ್ತೆ
ಬೆಂಗಳೂರು: ನಿವೃತ್ತ ಪೊಲೀಸ್ ಸಿಬ್ಬಂದಿ ಮುನಿಆಂಜಿನೇಯ(65) ಮೆಜೆಸ್ಟಿಕ್ನ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದೊಡ್ಡಬಳ್ಳಾಪುರದ ಮದುರನ ಹೊಸಹಳ್ಳಿ ನಿವಾಸಿ ಮುನಿಆಂಜಿನೇಯ, ಗೆಳೆಯರ ಜೊತೆ ಧರ್ಮಸ್ಥಳಕ್ಕೆ ಹೋಗಿ ಬರ್ತೀನಿ ಎಂದು ಮನೆಯಲ್ಲಿ ಹೇಳಿ ಹೊರಟಿದ್ದರು. ಆದ್ರೆ ಇಂದು ಮೆಜೆಸ್ಟಿಕ್ನಲ್ಲಿ ಶವ ಪತ್ತೆಯಾಗಿದೆ.
ದೇವರ ದರ್ಶನಕ್ಕೆಂದು ಹೋಗುವುದಾಗಿ ಹೇಳಿ ಹೊರಟ ಮುನಿಆಂಜಿನೇಯನವರು ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುನಿಆಂಜಿನೇಯ ನಿನ್ನೆ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ತೆರಳಿದ್ದರು. ಇಂದು ಬೆಳಗಿನ ಜಾವ 3 ಗಂಟೆಗೆ ಶವವಾಗಿ ಸಿಕ್ಕಿದ್ದಾರೆ. ಇನ್ನು ಬಸ್ ನಿಲ್ದಾಣದಲ್ಲಿ ಗೆಳೆಯರಿಗಾಗಿ ಕಾದು ಕುಳಿತಿದ್ದಾಗ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ನಿವೃತ್ತ ಪೊಲೀಸ್ ಸಿಬ್ಬಂದಿ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮುನಿಆಂಜಿನೇಯ ಬಳಿ ಇದ್ದ ನಗದು ಹಾಗೂ ಚಿನ್ನಾಭರಣ ನಾಪತ್ತೆಯಾಗಿದೆ. ಮುನಿಆಂಜಿನೇಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ