ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿ ಸಾವು, ಕಂಬನಿ ಮಿಡಿದ ಶಿಕ್ಷಕರು
ರಾಜ್ಯದಲ್ಲಿಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭಾ ಚುನಾವಣಾ ಮತದಾನ ನಡೆದಿದ್ದು, ಕೆಲ ಮತದಾರರು ಮತಚಲಾಯಿಸಿ ಮೃತರಾಗಿದ್ದಾರೆ. ಜೊತೆಗೆ ಚಿತ್ರದುರ್ಗದಲ್ಲಿ ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ಇದೀಗ ದೊಡ್ಡಬಳ್ಳಾಪುರ(Doddaballapur) ಹೊರವಲಯದ ರೋಜಿಪುರ ಮತಗಟ್ಟೆ 155 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಗ್ರಾಮಾಂತರ, ಏ.26: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapur) ಹೊರವಲಯದ ರೋಜಿಪುರ ಮತಗಟ್ಟೆ 155 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ಮಾರಗೊಂಡನಹಳ್ಳಿ ನಿವಾಸಿ ಕವಿತಾ ( 35 ) ಮೃತ ಶಿಕ್ಷಕಿ. ಕರ್ತವ್ಯದಲ್ಲಿರುವಾಗ ಸಂಜೆ ಶಾಲೆಯಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಕೂಡಲೇ ಸಿಬ್ಬಂದಿಗಳು ಅವರನ್ನು ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಶಿಕ್ಷಕಿಯ ನಿಧನಕ್ಕೆ ಸಹದ್ಯೋಗಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಚುನಾವಣಾ ಮಹಿಳಾ ಸಿಬ್ಬಂದಿ ಸಾವು
ಇನ್ನು ಲೋ ಬಿಪಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೃತಪಟ್ಟಿದ್ದರು. ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (55) ಮೃತ ಮಹಿಳಾ ಸಿಬ್ಬಂದಿ. ಯಶೋದಮ್ಮ ಅವರು ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡಿದ್ದರು. ಇವರನ್ನು ಕೂಡಲೆ ಚಳ್ಳಕೆರೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು. ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದರು.
ಇದನ್ನೂ ಓದಿ:ಚಿತ್ರದುರ್ಗ: ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ಸಾವು
ದಿಢೀರನೆ ಕುಸಿದು ಬಿದ್ದು ಮತದಾರರೊಬ್ಬ ಮೃತ
ಮತದಾನದ ಬಳಿಕ ದಿಢೀರನೆ ಕುಸಿದು ಬಿದ್ದು ಮತದಾರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಮಯೂರ ಯುವ ವೇದಿಕೆಯ ಸದಸ್ಯ ಹೆಚ್.ಕೆ.ರಮೇಶ್, ಮೃತಪಟ್ಟವರು. ಇಂದು(ಏ.26) ನಗರದ ಎಸ್‌ಎಸ್ ಪುರಂ ಮತಗಟ್ಟೆಗೆ ಪತ್ನಿ ಸಮೇತ ಬಂದು ಮತ ಚಲಾಯಿಸಿದ್ದರು. ಬಳಿಕ ತಮ್ಮದೇ ಮಾಲೀಕತ್ವದ ಬಟ್ಟೆ ಅಂಗಡಿಯಲ್ಲಿದ್ದಾಗ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Fri, 26 April 24