ಗಾಂಜಾ ವ್ಯಸನಿಗಳ ಅಡ್ಡೆಯಾಗಿದೆ ನೆಲಮಂಗಲ ದಾಸನಪುರದ ಅಂಡರ್ ಪಾಸ್, ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ
ಸರಿಯಾಗಿ ದೀಪದ ವ್ಯವಸ್ಥೆ ಹಾಗೂ ಸಿಸಿಟಿವಿ ಕಾರ್ಯ ನಿರ್ವಹಿಸದ ಹಿನ್ನೆಲೆ ಈ ಅಂಡರ್ ಪಾಸ್‌ಗಳಲ್ಲಿ ಯಾರೂ ಹೇಳೊರು ಕೇಳೊರು ಇಲ್ಲದಂತಾಗಿದೆ.

ಇಲ್ಲೊಂದು ಅಂಡರ್ ಪಾಸ್ ಬಳಿ ನಡೆದು ಹೊಗುವ ಪಾದಚಾರಿಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ದ್ವಿಚಕ್ರವಾಹನಗಳನ್ನು ಅಡ್ಡಗಟ್ಟಿ ರಾಬರಿ ಮಾಡುತ್ತಿದೆ ಯುವಕರ ಗ್ಯಾಂಗ್. ಸಂಜೆಯಾದರೆ ಸಾಕು ಗಾಂಜಾ ಮತ್ತಿನಲ್ಲಿ ದ್ವಿಚಕ್ರವಾಹನಗಳಲ್ಲಿ ಬಂದು ಚಾಕು ತೊರಿಸಿ ರಾಬರಿ ನಡೆಸುತ್ತಾರೆ! ಅಷ್ಟಕ್ಕೂ ಎಲ್ಲಿ ಅಂತೀರಾ? ಇಲ್ಲಿದೆ ಸ್ಟೋರಿ. ಬೆಂಗಳೂರು ಹೊರವಲಯದ ನೆಲಮಂಗಲ (Nelamangala) ಸಮೀಪವಿರುವ ದಾಸನಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 48ರ ಅಂಡರ್ ಪಾಸ್ ಗಳಲ್ಲಿ ಲೈಟುಗಳಿಲ್ಲದೆ ಹಾಗೂ ಸರಿಯಾದ ಸಿಸಿಟಿವಿಗಳ ಕಾರ್ಯ ನಿರ್ವಹಿಸದ ಹಿನ್ನೆಲೆ ಸಾರ್ವಜನಿಕರು ರಾತ್ರಿ ವೇಳೆ ಭಯದಿಂದಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕತ್ತಲಲ್ಲಿ ಕೆಲವೊಂದು ಯುವಕರ ಗ್ಯಾಂಗ್ ಗಾಂಜಾ (Ganja Gang) ಮತ್ತಿನಲ್ಲಿ ಬೈಕ್ ಮೇಲೆ ಬಂದು ಈ ಸ್ಥಳದಲ್ಲಿ ರಾಬರಿ ಮಾಡ್ತಿದ್ದಾರೆ. ಇಲ್ಲಿ ರಾತ್ರಿ ವೇಳೆ ಓಡಾಡುವವರನ್ನು ಹಿಡಿದು ಮಾರಕಾಸ್ತ್ರಗಳನ್ನ ತೋರಿಸಿ ಹಣ ಹಾಗು ಮೊಬೈಲ್ ಗಳನ್ನು ಕಿತ್ತುಕೊಂಡು ಎಸ್ಕೇಪ್ ಆಗುತ್ತಿದ್ದು, ಗಾಂಜಾ ಗ್ಯಾಂಗ್‌ಗೆ ಜನ ರೋಸಿ ಹೋಗಿದ್ದಾರೆ.
ಇನ್ನು ಸರಿಯಾಗಿ ದೀಪದ ವ್ಯವಸ್ಥೆ ಹಾಗೂ ಸಿಸಿಟಿವಿ ಕಾರ್ಯ ನಿರ್ವಹಿಸದ ಹಿನ್ನೆಲೆ ಈ ಅಂಡರ್ ಪಾಸ್‌ಗಳಲ್ಲಿ ಯಾರೂ ಹೇಳೊರು ಕೇಳೊರು ಇಲ್ಲದಂತಾಗಿದೆ. ಸಾಯಂಕಾಲದ ಸಮಯದಲ್ಲಿ ಕೂಲಿ ಕಾರ್ಮಿಕರು ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಜಾ ಹೊಡೆದು ಕೆಲವರ ಮೆಲೆ ಹಲ್ಲೆ ಕೂಡ ನಡೆಯುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಸರ್ಕಾರಿ ಶಾಲೆ ಮೈದಾನಗಳಲ್ಲಿ ಕಾಲೇಜು ಯುವಕರು ಕೂಡ ಮಧ್ಯಾಹ್ನದ ಸಮಯದಲ್ಲೆ ಗಾಂಜಾ ಹೊಡೆದು ಓಡಾಡುತ್ತಾರೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಗಾಂಜಾ ಮತ್ತಲ್ಲಿ ಯುವಕರ ಗ್ಯಾಂಗ್ ಪೈಕಿ ಓರ್ವ ಯುವಕನ್ನ ಎಳೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಅದೇಷ್ಟೋ ಕೇಸ್‌ಗಳು ಗಾಂಜಾ ಹೊಡೆದು ಆಗುವಂತ ಘಟನೆಗಳು ನಡೆದಿದ್ದು, ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಕೂಡ ಜನ ಹೆದರುತ್ತಾರೆ. ಹೀಗಾಗಿ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರಲ್ಲ; ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಯಾಕೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.
ಒಟ್ಟಾರೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋಗುವವರ ಮೆಲೆ ಈ ರೀತಿಯಲ್ಲಿ ಕಳ್ಳತನಗಳು ನಡೆಯುತ್ತಿರುವುದಕ್ಕೆ ಕಾರಣ ಈ ಅಂಡರ್ ಪಾಸ್ ಗಳಲ್ಲಿ ಲೈಟ್ ಗಳು ಇಲ್ಲದಿರುವುದು ಎನ್ನುತ್ತಾರೆ ದಾರಿಹೋಕರು. ಪೊಲೀಸರು ಇಂತಹ ಸ್ಥಳಗಳಲ್ಲಿ ಹೆಚ್ಚಿನ ಬೀಟ್ ಹಾಕಬೇಕು. ಜೊತೆಗೆ ಇಲ್ಲಿ ಟೋಲ್ ನವರ ಬೇಜವಾಬ್ದಾರಿತನ ಇಲ್ಲಿ ಎದ್ದುಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಲೈಟ್‌ಗಳ ಜೊತೆಗೆ ಇಲ್ಲಿ ಅಳವಡಿಸಿರುವ ಸಿಸಿಟಿವಿಗಳು ಕಾರ್ಯ ನಿರ್ವಹಿಸುವಂತೆ ಮಾಡಿ ಸಾರ್ವಜನಿಕರು ನೆಮ್ಮದಿಯಾಗಿ ಓಡಾಡಲು ಸಹಾಯಕವಾಗಿರಬೇಕು ಎಂಬುದು ಸ್ಥಳೀಯರ ಕೋರಿಕೆಯಾಗಿದೆ.
ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ