AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗದಲ್ಲಿ ಟೋಲ್ ಸಂಗ್ರಹ: ಯಾವ ವಾಹನಕ್ಕೆ ಎಷ್ಟು?

Doddaballapur-Hoskote Toll: ಬೆಂಗಳೂರು ನಗರದ ಸಂಚಾರದ ದಟ್ಟಣೆ ಕಡಿಮೆ ಮಾಡುವ, ಸರಕು ಸಾಗಣೆ ವಾಹನಗಳ ತಡೆರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸ್ಯಾಟಲೈಟ್​ ಟೌನ್ ರಿಂಗ್​ ರೋಡ್​​ನ ಮೊದಲ ಹಂತದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ದೊಡ್ಡಬಳ್ಳಾಪುರದಿಂದ ಹೊಸಕೋಟೆಗೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಬಳಸಿದರೆ ಶುಲ್ಕ ಪಾವತಿಸಬೇಕು. ಹಾಗಾದ್ರೆ, ಯಾವೆಲ್ಲಾ ವಾಹನಗಳಿಗೆ ಎಷ್ಟು ಟೋಲ್ ಶುಲ್ಕ ನಿಗದಿ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

ಇಂದಿನಿಂದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗದಲ್ಲಿ ಟೋಲ್ ಸಂಗ್ರಹ: ಯಾವ ವಾಹನಕ್ಕೆ ಎಷ್ಟು?
Follow us
ರಮೇಶ್ ಬಿ. ಜವಳಗೇರಾ
|

Updated on: Nov 17, 2023 | 7:22 AM

ಬೆಂಗಳೂರು, (ನವೆಂಬರ್ 17): ನಗರದ ಸಂಚಾರದ ದಟ್ಟಣೆ ಕಡಿಮೆ ಮಾಡುವ, ಸರಕು ಸಾಗಣೆ ವಾಹನಗಳ ತಡೆರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸ್ಯಾಟಲೈಟ್​ ಟೌನ್ ರಿಂಗ್​ ರೋಡ್​​ನ ಮೊದಲ ಹಂತದ ದೊಡ್ಡಬಳ್ಳಾಪುರ-ಹೊಸಕೋಟೆ  (Doddaballapur-Hoskote )ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಆರಂಭಗೊಂಡು ಹೊಸಕೋಟೆ ವರೆಗಿನ ನಾಲ್ಕು ಪಥ ರಸ್ತೆಯ 47 ಕಿ.ಮಿ.ನಿಂದ 76.150 ಕಿ.ಮಿ ವರೆಗೆ ಬಳಕೆದಾರರಿಗೆ ನಲ್ಲೂರು ದೇವನಹಳ್ಳಿ ಸುಂಕ ವಸೂಲಾತಿ ಕೇಂದ್ರದಲ್ಲಿ ಇಂದಿನಿಂದ (ವೆಂಬರ್ 17) ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಇದು 2024ರ ಮಾರ್ಚ್‌31 ರವರೆಗೆ ಜಾರಿಯಲ್ಲಿರಲಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ( NHAI) ಅಧಿಸೂಚನೆ ಹೊರಡಿಸಿದೆ.  ಹಾಗಾದ್ರೆ, ಯಾವೆಲ್ಲಾ ವಾಹನಗಳಿಗೆ ಎಷ್ಟೆಷ್ಟು ಶುಲ್ಕ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಯಾವ ವಾಹನಕ್ಕೆ ಎಷ್ಟು ಶುಲ್ಕ?

  • ಕಾರು, ಜೀಪು, ವ್ಯಾನು, ಲಘು ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 70 ರೂ. ಹಾಗೂ ಅದೇ ದಿನ ಮರಳಿ ಬಂದರೆ 105 ರೂ. ಪಾವತಿಸಬೇಕು. ಇದೇ ಒಂದೇ ತಿಂಗಳಲ್ಲಿ 50 ಸಂಚರಿಸುವ ಮಾಸಿಕ ಪಾಸ್‌ಗೆ 2375 ರೂ. ನಿಗದಿ ಮಾಡಲಾಗಿದೆ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾನಹಗಳಿಗಾಗಿ ಶುಲ್ಕ 35 ರೂ. ಪಾವತಿಸುವಂತೆ ಸೂಚಿಸಲಾಗಿದೆ.
  • ಇನ್ನು ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಹಾಗೂ ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 115 ರೂ. ಹಾಗೂ ಅದೇ ದಿನ ಮರಳಿ ಬಂದರೆ 175 ರೂ. ಹಾಗೂ ಮಾಸಿಕ ಪಾಸ್‌ ರೂಪದಲ್ಲಿ3835 ರೂ. ಪಾವತಿಸಬೇಕು. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾನಹಗಳಿಗಾಗಿ ಶುಲ್ಕ 60 ರೂ. ನಿಗದಿ ಮಾಡಲಾಗಿದೆ.
  • ಬಸ್‌ ಅಥವಾ ಟ್ರಕ್‌ಗಳಿಗೆ ಏಕ ಮುಖ ಸಂಚಾರಕ್ಕೆ 240 ರೂ. ಅದೇ ದಿನ ಮರಳಿ ಬಂದರೆ 360 ರೂ. ಪಾವತಿಸಬೇಕು, ಮಾಸಿಕ 8040 ರೂ. ಪಾವತಿ ಮಾಡಬೇಕು. ಜಿಲ್ಲೆಯ ಒಳಗೆ ನೊಂದಣಿ ಮಾಡಿಸಿಕೊಂಡಿರುವ ವಾಣಿಜ್ಯ ವಾಹನಗಳಿಗೆ120 ರೂ. ನಿಗದಿಪಡಿಸಲಾಗಿದೆ.
  • 3 ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರಕ್ಕೆ 265 ರೂ. ಅದೇ ದಿನ ವಾಪಾಸ್‌ ಬಂದರೆ 360 ರೂ. ಪಾವತಿ ಮಾಡಬೇಕು. ಮಾಸಿಕ ಪಾವತಿಗೆ 8770 ರೂ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ 130 ರೂ. ನಿಗದಿಪಡಿಸಿದೆ.
  • 3 ಆಕ್ಸೆಲ್​ಗಿಂತ ಹೆಚ್ಚು ಭಾರೀ ವಾಹನಗಳಿಗೆ ಒಂದು ಬಾರಿ ಸಂಚಾರಕ್ಕೆ 380 ರೂ. ಅದೇ ದಿನ ವಾಪಾಸ್‌ಗೆ 565 ರೂ. ಪಾವತಿಸಬೇಕು. ಮಾಸಿಕ 12605 ರೂ. ಹಾಗೂ ಜಿಲ್ಲೆಯ ಒಳಗೆ ನೊಂದಣಿಯಾದ ವಾಹನಗಳಿಗೆ 130 ರೂ. ನಿಗದಿಪಡಿಸಲಾಗಿದೆ.

ಕಾಮಗಾರಿಯ ವಿವರ

ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಅನ್ನು ಬೆಂಗಳೂರನ್ನು ನೆರೆಯ ಪಟ್ಟಣಗಳಾದ ದಾಬಸ್‌ಪೇಟೆ, ದೇವನಹಳ್ಳಿ, ಹೊಸಕೋಟೆ ಮತ್ತು ರಾಮನಗರದೊಂದಿಗೆ ಸಂಪರ್ಕಿಸಲು ನಿರ್ಮಾಣ ಮಾಡಲಾಗುತ್ತದೆ. ಒಮ್ಮೆ ಸಂಪೂರ್ಣವಾಗಿ ಸಿದ್ಧವಾದ ನಂತರ ದೂರದ ವಾಣಿಜ್ಯ ವಾಹನಗಳು ಬೆಂಗಳೂರನ್ನು ಪ್ರವೇಶಿಸುವ ಅಗತ್ಯವನ್ನು ತಪ್ಪಿಸುತ್ತದೆ. ಸ್ಯಾಟಲೈಟ್‌ ಟೌನ್‌ಗಳ ನಡುವೆ ಚಲಿಸುವ ಸಂಚಾರವು ನಗರವನ್ನು ಬೈಪಾಸ್ ಮಾಡಲು ಸಾಧ್ಯವಾಗುತ್ತದೆ.

17,000 ಕೋಟಿ ರೂಪಾಯಿಗಳ ಯೋಜನೆಯನ್ನು 10 ಪ್ಯಾಕೇಜ್‌ಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಭಿವೃದ್ಧಿಪಡಿಸುತ್ತಿದೆ. 10 ಪ್ಯಾಕೇಜ್‌ಗಳಲ್ಲಿ ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ಭಾಗ (34.15 ಕಿ.ಮೀ) ಪೂರ್ಣಗೊಂಡಿದೆ. ಇದು ಗಂಟೆಗೆ 10,000 ಪ್ಯಾಸೆಂಜರ್ ಕಾರ್ ಯುನಿಟ್ (PCU) ನೊಂದಿಗೆ ನಾಲ್ಕು ಲೇನ್‌ಗಳನ್ನು ಹೊಂದಿದೆ.

ಈ ರಸ್ತೆ ಪೂರ್ಣಗೊಂಡರೆ ಬೇರೆ-ಬೇರೆ ಪ್ರದೇಶಗಳಿಗೆ ತೆರಳುವ ವಾಣಿಜ್ಯ ವಾಹನಗಳು ಬೆಂಗಳೂರು ನಗರ ಪ್ರವೇಶಿದೇ ಹೊರವಲಯದ ಮೂಲಕ ಸಂಚರಿಸಬಹುದಾಗಿದೆ. ಬೆಂಗಳೂರಿನ ಟ್ರಾಫಿಕ್​ ಸಮಸ್ಯೆ ಕಡಿಮೆ ಮಾಡಲು, ವಾನಹಗಳು ನಿಗದಿತ ಸ್ಥಳವನ್ನು ತ್ವರಿತವಾಗಿ ತಲುಪಲು ಈ ಮಾರ್ಗ ಅನುಕೂಲವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ