ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಪ್ಲಾಜಾ: ಇಂದು ಮಧ್ಯರಾತ್ರಿಯಿಂದ ಆರಂಭ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಹೊಸದಾಗಿ ಮತ್ತೊಂದು ಟೋಲ್ ಪ್ಲಾಜಾ ಆರಂಭವಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಹೊಸ ಟೋಲ್ ಆರಂಭಗೊಳ್ಳಲಿದ್ದು, ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಬರೆ ಎಳೆಯಲಿದೆ.

ದೇವನಹಳ್ಳಿ, ನವೆಂಬರ್ 16: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಹೊಸದಾಗಿ ಮತ್ತೊಂದು ಟೋಲ್ ಪ್ಲಾಜಾ (toll plaza) ಆರಂಭವಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಹೊಸ ಟೋಲ್ ಆರಂಭಗೊಳ್ಳಲಿದ್ದು, ಬೆಂಗಳೂರಿಗೆ ಬರುವ ವಾಹನ ಸವಾರರಿಗೆ ಮತ್ತೊಂದು ಟೋಲ್ ಬರೆ ಎಳೆಯಲಿದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ದಾಬಸ್ ಪೇಟೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಟೋಲ್ ನಿರ್ಮಿಸಲಾಗಿದೆ.
ದೊಡ್ಡಬಳ್ಳಾಪುರ ಬೈಪಾಸ್ನಿಂದ ಹೊಸಕೋಟೆವರೆಗೂ ಈಗಾಗಲೇ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ದಾಬಸ್ ಪೇಟೆಯಿಂದ ಹೊಸಕೋಟೆವರೆಗಿನ ಚತುಶ್ಪಥ ಹೆದ್ದಾರಿ ಇದೆ. ಸುಮಾರು 43 ಕಿ.ಮೀ ಹೆದ್ದಾರಿ ರಸ್ತೆ ವಾಹನ ಸವಾರರಿಗೆ ಬಳಕೆಗೆ ಮುಕ್ತವಾಗಿದೆ. ಈ ಹಿನ್ನಲೆ ನಾಳೆಯಿಂದ ನಲ್ಲೂರು ಬಳಿಯ ಟೋಲ್ ಆರಂಭಗೊಳಲಿದೆ.
ಇದನ್ನೂ ಓದಿ: ವಾಹನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ದೇವನಹಳ್ಳಿ ಏರ್ಪೋರ್ಟ್ ರಸ್ತೆಯ ಟೋಲ್ ದರ ಹೆಚ್ಚಳ
ನ. 17 ರಿಂದ ಟೋಲ್ ಆರಂಭಗೊಳ್ಳಲಿದ್ದು, 34.15 ಕಿ.ಮೀ ಪ್ರಯಾಣಕ್ಕೆ ವಾಹನ ಸವಾರರು ಟೋಲ್ ಸುಂಕ ಪಾವತಿ ಮಾಡಬೇಕಿದೆ.
ಟೋಲ್ ದರ ಹೀಗಿದೆ
- ಕಾರು, ಲಘು ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 70, ಅದೇ ದಿನ ಮರಳಿ ಬಂದರೆ 105 ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 2,375 ರೂ.
- ಲಘು ವಾಣಿಜ್ಯ ಮತ್ತು ಸರಕು ವಾಹನಗಳು, ಮಿನಿ ಬಸ್, ಏಕಮುಖ ಸಂಚಾರಕ್ಕೆ 115, ಅದೇ ದಿನ ಮರಳಿ ಬಂದರೆ 175 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 3,835 ರೂ. ಇರಲಿದೆ.
- ಬಸ್, ಟ್ರಕ್‌ಗಳ ಏಕಮುಖ ಸಂಚಾರಕ್ಕೆ 240 ರೂ. ಅದೇ ದಿನ ಮರಳಿ ಬಂದರೆ 360 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 8,040 ರೂ.
- ವಾಣಿಜ್ಯ ವಾಹನಗಳು ಏಕಮುಖ ಸಂಚಾರಕ್ಕೆ 265 ರೂ. ಅದೇ ದಿನ ಮರಳಿ ಬಂದರೆ 395 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 8,870 ರೂ. ಇರಲಿದೆ.
- 4 ರಿಂದ 6 ಆಕ್ಸೆಲ್‌ಗಳ ವಾಹನಗಳ ಏಕಮುಖ ಸಂಚಾರಕ್ಕೆ 380 ರೂ. ಅದೇ ದಿನ ಮರಳಿ ಬಂದರೆ 565 ರೂ. ಇರಲಿದೆ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 12,605 ರೂ.
- 7 ಅಥವಾ ಅದಕ್ಕೂ ಹೆಚ್ಚಿನ ಆಕ್ಸೆಲ್ ವಾಹನಗಳು ಏಕಮುಖ ಸಂಚಾರಕ್ಕೆ 460 ರೂ. ಅದೇ ದಿನ ಮರಳಿ ಬಂದರೆ 690 ರೂ. ಒಂದು ತಿಂಗಳಲ್ಲಿ 50 ಬಾರಿ ಸಂಚಾರದ ಮಾಸಿಕ ಪಾಸ್ ಶುಲ್ಕ 15, 345 ರೂ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:23 pm, Thu, 16 November 23