ಪೊಲೀಸರ ಕಿರುಕುಳಕ್ಕೆ ಹೊಸಕೋಟೆಯಲ್ಲಿ ವ್ಯಕ್ತಿ ಬಲಿ?: ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಪೊಲೀಸರ ಕಿರುಕುಳ ಹಿನ್ನೆಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಹೊಸಕೋಟೆಯಲ್ಲಿ ಕೇಳಿಬಂದಿದೆ. ಪ್ರಕರಣವೊಂದರ ಸಂಬಂಧ ವಿಚಾರಣೆಗೆ ಹೋಗಿಬಂದ ವ್ಯಕ್ತಿಯ ಶವ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮತ್ತೊಂದೆಡೆ ತನ್ನನ್ನು ವಿವಸ್ತ್ರಗೊಳಿಸಿ ಪೊಲೀಸರು ಥಳಿಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಆರೋಪಿಸಿದ್ದಾರೆ.

ಪೊಲೀಸರ ಕಿರುಕುಳಕ್ಕೆ ಹೊಸಕೋಟೆಯಲ್ಲಿ ವ್ಯಕ್ತಿ ಬಲಿ?: ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಸಾಂದರ್ಭಿಕ ಚಿತ್ರ

Updated on: Jan 07, 2026 | 10:07 AM

ದೇವನಹಳ್ಳಿ/ಹುಬ್ಬಳ್ಳಿ, ಜನವರಿ 07: ಮಹಿಳೆ‌ ನಾಪತ್ತೆ ವಿಚಾರವಾಗಿ ಪೊಲೀಸರ ಕಿರುಕುಳ ಹಿನ್ನೆಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಹೊಸಕೋಟೆ ತಾಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಕೇಳಿಬಂದಿದೆ. ಮೈಲಾಪುರ ಗ್ರಾಮದ ಮಂಜುನಾಥ್(44) ಮೃತ ದುರ್ದೈವಿಯಾಗಿದ್ದು, ತೋಟದ ಬಳಿ ನೇಣು‌ ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

ತೋಟದ ಕೆಲಸಕ್ಕೆ ಬರುತ್ತಿದ್ದ ಅಶ್ವಿನಿ ಎಂಬಾಕೆ 8 ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮಂಜುನಾಥ್​ನನ್ನ ಪೊಲೀಸರು ವಿಚಾರಣೆಗೆ ಕರೆದಿದ್ದರು. ಮಹಿಳೆ ಜೊತೆ ಸಂಬಂಧ ಆರೋಪ ಹಿನ್ನೆಲೆ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಮುಗಿಸಿ‌ ಮನೆಗೆ ಬಂದಿದ್ದ ಅವರು​​​ ಶವವಾಗಿ ಪತ್ತೆಯಾಗಿದ್ದು, ತಂದೆ ಸಾವಿಗೆ ಪೊಲೀಸರೇ ಕಾರಣ ಎಂದು ಮಕ್ಕಳು ಆರೋಪಿಸಿದ್ದಾರೆ. ಕಾನ್ಸ್​​ಟೇಬಲ್​ ಅಂಬರೀಶ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದ್ದು, ಕೊಲೆ ಮಾಡಿರುವ ಶಂಕೆ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ.

ಇದನ್ನೂ ಓದಿ: ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ!

ಬಿಜೆಪಿ ಕಾರ್ಯಕರ್ತೆ ಮೇಲೆ ಖಾಕಿ ದರ್ಪ?

ಬಿಜೆಪಿ ಕಾರ್ಯಕರ್ತೆ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ ಹುಬ್ಬಳ್ಳಿ ನಗರದ ಕೇಶ್ವಾಪುರ ಠಾಣೆ ಪೊಲೀಸರ ವಿರುದ್ಧ ಕೇಳಿಬಂದಿದೆ. ಬಟ್ಟೆಬಿಚ್ಚಿದ್ರೂ ಬಿಡದೆ ಕೇಶ್ವಾಪುರ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ತನ್ನನ್ನು ಥಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತೆ ಸುಜಾತಾ ಅಲಿಯಾಸ್​​ ವಿಜಯಲಕ್ಷ್ಮೀ ಆರೋಪಿಸಿದ್ದಾರೆ. ಸುಜಾತಾ ಹಂಡಿ ವಿರುದ್ಧ ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್​ ಸುವರ್ಣ ಕಲ್ಲಕುಂಟ್ಲಾ ದೂರು ನಡಿದ್ದರು. ಅದೇ ದೂರಿನ ವಿಚಾರವಾಗಿ ಪೊಲೀಸರು ದರ್ಪ ನಡೆಸಿದ್ದಾರೆ ಎಂದು ದೂರಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಅಧಿಕಾರಿಗಳ ಜೊತೆ ಸುಜಾತಾ ಹಂಡಿ ತೆರಳಿದ್ದು, ಈ ವೇಳೆ ಸುವರ್ಣ ಕಲ್ಲಕುಂಟ್ಲಾ ಮತ್ತು ಅವರ ಬೆಂಬಲಿಗರು ಗಲಾಟೆ ನಡೆಸಿದ್ದರು. ಘಟನೆ ಸಂಬಂಧ ಕೇಶ್ವಾಪುರ ಠಾಣೆಗೆ ದೂರು, ಪ್ರತಿದೂರು ದಾಖಲಾಗಿತ್ತು. ಕಾರ್ಪೊರೇಟರ್​ ದೂರು ಆಧರಿಸಿ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಕೂಗಾಡಿದ್ದರು. ಈ ವೇಳೆ ವಿವಸ್ತ್ರಗೊಳಿಸಿ ಕೇಶ್ವಾಪುರ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಸುಜಾತಾ ಹಂಡಿ‌ ಕೆಲ ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.