ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ!
ಹಣಕಾಸಿನ ವಿವಾದದಿಂದಸಹೋದರನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿ, ತಮ್ಮನೇ ಮೈ ಸುಟ್ಟುಕೊಂಡ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಬೆಂಕಿ ಹಚ್ಚುವ ವೇಳೆ ಕೈನಲ್ಲಿ ಪೆಟ್ರೋಲ್ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನೇ ಸುಟ್ಟಿದೆ. ಕಾಪಾಡಿ ಕಾಪಾಡಿ ಅಂತ ವ್ಯಕ್ತಿ ಕಿರುಚಾಡಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ.

ದೇವನಹಳ್ಳಿ, ಜನವರಿ 07: ಮಧ್ಯರಾತ್ರಿ ವೇಳೆ ಸಹೋದರನ ಮನೆ ಸುಡಲು ಹೋಗಿ ಆ ಬೆಂಕಿಯಲ್ಲಿ ತಾನೇ ಸುಟ್ಟು ವ್ಯಕ್ತಿಯೋರ್ವ ಆಸ್ಪತ್ರೆ ಸೇರಿರುವ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಗಾಯಗೊಂಡಿರುವ ಮುನಿರಾಜು ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಅಣ್ಣನ ಕುಟುಂಬವನ್ನೇ ಮುಗಿಸಲು ಸಂಚು
ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದ. ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ ಕಾರಣ ಸ್ವಲ್ಪ ಜಮೀನು ಮಾರಿ ಕುಟುಂಬಸ್ಥರು ಹಣ ನೀಡಿದ್ದರು. ಆದ್ರೆ ಆ ಹಣ ಸಾಕಾಗದ ಕಾರಣ ಉಳಿದ ಜಮೀನು ಸಹ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಆರೋಪಿ ಮುನಿರಾಜು ಕೇಳಿದ್ದ. ಆದ್ರೆ ಇರೋ ಅಲ್ಪ ಸ್ವಲ್ಪ ಜಮೀನು ಮಾರಲ್ಲ ಎಂದು ಅಣ್ಣ ಸ್ಪಷ್ಟವಾಗಿ ಹೇಳಿದ್ದ. ಹೀಗಾಗಿ ಸಹೋದರ ರಾಮಕೃಷ್ಣ ಕುಟುಂಬವನ್ನೇ ಮುಗಿಸುವ ಸಂಚುಮಾಡಿದ್ದ ಮುನಿರಾಜು, ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ರೂಂನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಇದನ್ನೂ ಓದಿ: ಸಂಪ್ನಲ್ಲಿ ತಾಯಿ-ಮಕ್ಕಳ ಶವ ಪತ್ತೆ; ನಿಗೂಢ ಸಾವಿಗೆ ಕಾರಣ ಏನು?
ಆದ್ರೆ ಅಣ್ಣನ ಕುಟುಂಬವನ್ನೇ ನಿರ್ನಾಮ ಮಾಡಲು ಹೋದ ಮುನಿರಾಜುವಿಗೆ ದೇವರು ಅಲ್ಲೇ ಶಿಕ್ಷೆ ಕೊಟ್ಟಿದ್ದಾನೆ. ಬೆಂಕಿ ಹಚ್ಚುವ ವೇಳೆ ಈತನ ಕೈನಲ್ಲಿ ಪೆಟ್ರೋಲ್ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನೇ ಸುಟ್ಟಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾಪಾಡಿ ಕಾಪಾಡಿ ಅಂತ ಮುನಿರಾಜು ಕಿರುಚಾಡಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಾಯಾಳುವಿಗೆ ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈ ಬಗ್ಗೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.