Tumakuru: ಸಂಪ್‌ನಲ್ಲಿ ತಾಯಿ-ಮಕ್ಕಳ ಶವ ಪತ್ತೆ: ನಿಗೂಢ ಸಾವಿಗೆ ಕಾರಣ ಏನು?
ಸಂಪ್‌ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಸಿಂಗನಹಳ್ಳಿಯಲ್ಲಿ ನಡೆದಿದೆ. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಮಾನಸಿಕ ಖಿನ್ನತೆಯಿಂದ ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತಳ ಸಹೋದರನ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ.

ತುಮಕೂರು, ಜನವರಿ 07: ಸಂಪ್‌ನಲ್ಲಿ ತಾಯಿ ಮತ್ತು ಮಕ್ಕಳ ಶವ ಪತ್ತೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಸಿಂಗನಹಳ್ಳಿಯಲ್ಲಿ ನಡೆದಿದೆ. ವಿಜಯಲಕ್ಷ್ಮೀ ಹಾಗೂ ಅವರ ಇಬ್ಬರು ಮಕ್ಕಳಾದ ಚೇತನ ಮತ್ತು ಚೈತನ್ಯ ಮೃತ ದುರ್ದೈವಿಗಳಾಗಿದ್ದು, ಮನೆಯಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದೆ. ಹೀಗಾಗಿ ಮಾನಸಿಕ ಖಿನ್ನತೆಯಿಂದ ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಜಯಲಕ್ಷ್ಮೀ ಪತಿ ಸಂಪತ್ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಅವರು ಮನೆಗೆ ಬಂದಾಗ ಪತ್ನಿ ಹಾಗೂ ಮಕ್ಕಳು ಕಾಣಿಸುತ್ತಿರಲಿಲ್ಲ. ಹೀಗಾಗಿ ಮನೆ ತುಂಬಾ ಹುಡುಕಾಡಿದ್ದಾರೆ. ಎಲ್ಲಿಯೂ ಸಿಗದಿದ್ದಾಗ ತನ್ನ ತಂದೆ ಹಾಗೂ ತಾಯಿಗೆ ಈ ವಿಚಾರ ತಿಳಿಸಿ ಮನೆಯ ಮುಂದೆ ನಿಂತಿದ್ದಾರೆ. ಈ ವೇಳೆ ಸಂಪ್ ತೆರೆದಿರೋದು ಅವರ ಕಣ್ಣಿಗೆ ಬಿದ್ದಿದೆ. ಇಣುಕಿ ನೋಡಿದಾಗ ಒಂದರನಂತರ ಒಂದರಂತೆ ಮೂರು ಶವಗಳು ಕಾಣಿಸಿವೆ. ಕೂಡಲೇ ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸರಿಗೆ ಸಂಪತ್ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ; ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣ
ಮೂಲತಃ ಶಿವಗಂಗೆಯವರಾದ ಸಂಪತ್ ಕುಟುಂಬ ಕಳೆದ 30 ವರ್ಷಗಳಿಂದ ಸಿಂಗನಹಳ್ಳಿಯಲ್ಲಿ ವಾಸವಿದ್ದು, ಇತ್ತೀಚಿನ ಕೆಲ ವರ್ಷಗಳಿಂದ ಈ ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಸಂಪತ್ ಜೊತೆ ಪತ್ನಿ ವಿಜಯಲಕ್ಷ್ಮೀ, ಇಬ್ಬರು ಮಕ್ಕಳು ಹಾಗೂ ಆತನ ತಂದೆ ಹನುಮಂತರಾಜು ಮತ್ತು ತಾಯಿ ರೇಣುಕಮ್ಮ ಸಹ ವಾಸವಿದ್ದರು. ಸಂಪತ್ ಹಾಗೂ ಆತನ ತಾಯಿ ರೇಣುಕಮ್ಮ ಕೆಲಸಕ್ಕೆ ಹೋದ್ರೆ, ಇತ್ತ ವಿಜಯಲಕ್ಷ್ಮೀ ಮನೆಯಲ್ಲಿದ್ದ ಮಾವನ ಉಪಚಾರ ಮಾಡಿಕೊಂಡು ಮಕ್ಕಳ ಜೊತೆ ಇರುತಿದ್ದರು. ಆದೇ ರೀತಿ ನಿನ್ನೆ ಸಹ ಸಂಪತ್ ಹಾಗೂ ಅವರ ತಾಯಿ ಕೆಲಸಕ್ಕೆ ತೆರಳಿದ್ದಾರೆ. ಈ ನಡುವೆ ಮಾವ ಕೂಡ ಕೆಲಸವಿದೆ ಎಂದು ನೆಲಮಂಗಲಕ್ಕೆ ತೆರಳಿದ್ದಾರೆ. ಆ ಬಳಿಕ ಮನೆಯಲ್ಲಿ ಇಬ್ಬರು ಮಕ್ಕಳ ಜೊತೆ ಇದ್ದ ವಿಜಯಲಕ್ಷ್ಮೀ ನಿಗೂಢವಾಗಿ ಸಾವನಪ್ಪಿದ್ದು, ಶವ ಸಂಪ್‌ನಲ್ಲಿ ಪತ್ತೆಯಾಗಿದೆ.
ಇನ್ನು ಮನೆಯಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹಾಗೂ ನಮ್ಮ ಸಾವಿಗೆ ಯಾರು ಕಾರಣವಲ್ಲ ಎಂದು ಅದರಲ್ಲಿ ವಿಜಯಲಕ್ಷ್ಮೀ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಯಿಂದ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದರೂ ಮಕ್ಕಳಿಬ್ಬರ ಸಾವು ಪೊಲೀಸರಿಗೆ ಗೊಂದಲ ಸೃಷ್ಟಿಸಿದೆ. ಹೀಗಾಗಿ ಮೃತಳ ಸಹೋದರನ ದೂರಿನ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.