ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಮದ್ಯದ ವಿಚಾರಕ್ಕೆ ಭೀಕರ ಘಟನೆ ನಡೆದಿದೆ. ನನಗೆ ಎಣ್ಣೆ ಕಡಿಮೆ, ನಿನಗೆ ಜಾಸ್ತಿ ಅನ್ನೋ ವಿಚಾರಕ್ಕೆ ನಡೆದ ಗಲಾಟೆ ಬಳಿಕ ಕುಡಿದ ಮತ್ತಿನಲ್ಲಿ ತಂದೆಯಿಂದಲೇ ಮಗನ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಚಿಕ್ಕಮಗಳೂರು, ಜನವರಿ 05: ಕುಡಿತದ ಚಟ ಓರ್ವ ವ್ಯಕ್ತಿಯನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗಬಲ್ಲದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಎಣ್ಣೆ ವಿಚಾರವಾಗಿ ಶುರುವಾದ ಸಣ್ಣ ಗಲಾಟೆ ಕೊನೆಗೆ ತಂದೆಯಿಂದಲೇ (Father) ಮಗನ ಕೊಲೆ (murder) ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ರವಿವಾರ ಘಟನೆ ನಡೆದಿದೆ. ಮಗ ಪ್ರದೀಪ್(40) ನನ್ನ ತಂದೆ ರಮೇಶ್ ಆಚಾರ್(65) ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಡೆದದ್ದೇನು?
ಅಪ್ಪ ಮತ್ತು ಮಗ ಇಬ್ಬರೂ ಕುಡಿತದ ಚಟಕ್ಕೆ ದಾಸರಾಗಿದ್ದರು. ಅದಷ್ಟೇ ಅಲ್ಲದೆ ನಾ ಮೇಲು, ತಾ ಮೇಲು ಎಂದು ಪೈಪೋಟಿಗೆ ಇಳಿಯುತ್ತಿದ್ದರು. ಹೀಗೆ ಸ್ನೇಹಿತರಂತೆ ಒಟ್ಟೊಟ್ಟಿಗೆ ಕೂತು ನನಗೆ ಜಾಸ್ತಿ, ನನಗೆ ಕಮ್ಮಿ ಅಂತ ಹಠಕ್ಕೆ ಬಿದ್ದು ಕುಡಿಯುತ್ತಿದ್ದರು. ಅಪ್ಪ-ಮಗನ ನಡುವಿನ ಎಣ್ಣೆ ವಿಚಾರವಾಗಿ ಆರಂಭವಾದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ: ಹಿಂದೂ ಯುವತಿಯನ್ನು ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
ತಂದೆ ರಮೇಶ್, ಎದೆಯೆತ್ತರಕ್ಕೆ ಬೆಳೆದಿದ್ದ ಮಗನಿಗೆ ಬುದ್ಧಿ ಹೇಳಿ ಸರಿ ದಾರಿಗೆ ತರಬೇಕಿತ್ತು. ಆದರೆ ತಾವೇ ಮಗನನ್ನ ಜೊತೆಗೆ ಕೂರಿಸಿಕೊಂಡು ಎಣ್ಣೆ ಕುಡಿಯುತ್ತಿದ್ದರು, ಅಲ್ಲದೆ ಈಗ ಮಗನ ಹೆಣವನ್ನೇ ಉರುಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಆನೆಗುಂಡಿ ಗ್ರಾಮದ ನಿವಾಸಿ ರಮೇಶ್, ಚಿಕ್ಕ ವಯಸ್ಸಿನಿಂದಲೂ ಕೂಡ ಕುಡಿತದ ಚಟಕ್ಕೆ ದಾಸನಾಗಿದ್ದರು. ತಾವು ಮಾತ್ರ ಕುಡಿದಿದ್ದರೆ ಏನೂ ಆಗ್ತಿರಲಿಲ್ಲ, ಆದರೆ ಜೊತೆಗೆ ತಮ್ಮ ಮಗನನ್ನು ಒಟ್ಟಿಗೆ ಕೂರಿಸಿಕೊಂಡು ಕುಡಿಯುವುದಕ್ಕೆ ಆರಂಭಿಸಿದ್ದರು.
ಅಪ್ಪ-ಮಗ ಇಬ್ಬರೂ ಎಣ್ಣೆ ಕುಡಿದ ಮೇಲೆ ನಿತ್ಯ ಜಗಳ ಮಾಡಿಕೊಳ್ಳುತ್ತಿದ್ದರು. ಕುಡುಕ ತಂದೆ ಮತ್ತು ಮಗನ ಕಾಟಕ್ಕೆ ತಾಯಿ ಮಂಜುಳಾ ಮನೆ ಬಿಟ್ಟು ಹೋಗಿದ್ದರು. ಹೆಣ್ಣು ದಿಕ್ಕಿಲ್ಲದ ಮನೆಯಲ್ಲಿ ಅಪ್ಪ-ಮಗ ಇಬ್ಬರದ್ದೇ ಕಾರು-ಬಾರು. ಹೇಳೋರು, ಕೇಳೋರು ಯಾರು ಇಲ್ಲದ್ದಿದ್ದರಿಂದ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ಕುಡಿಯೋದನ್ನೇ ಕಾಯಂ ವೃತ್ತಿ ಮಾಡಿಕೊಂಡಿದ್ದರು. ನನಗೆ ಎಣ್ಣೆ ಕಡಿಮೆ, ನಿನಗೆ ಜಾಸ್ತಿ ಅನ್ನೋ ವಿಚಾರಕ್ಕೆ ರವಿವಾರದಂದು ಗಲಾಟೆ ನಡೆದಿದೆ. ಈ ವೇಳೆ ರಮೇಶ್, ಮಗ ಪ್ರದೀಪನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು. ಕುಡಿದು ಕ್ಷುಲ್ಲಕ ಕಾರಣಕ್ಕೆ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಇವರ ನಿರಂತರ ಜಗಳದ ಕಾಟ ತಡೆಯಲಾರದೆ ಪ್ರದೀಪ್ ತಾಯಿ ಈ ಮೊದಲೇ ಮನೆ ಬಿಟ್ಟು ಹೋಗಿದ್ದರು. ನಿನ್ನೆ ಅಡಕೆ ಮಾರಿ ಬಂದಿದ್ದು, ಅದರಿಂದ ಸಿಕ್ಕ ಹಣದಲ್ಲಿ ರಾತ್ರಿ ಜೊಡೆತ್ತಿನಂತಿದ್ದ ಅಪ್ಪ-ಮಗ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ, ರಮೇಶ್ ಆಚಾರ್ ತನ್ನ ಮಗ ಪ್ರದೀಪ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ತಂದೆ
ಇಡೀ ರಾತ್ರಿ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ರಮೇಶ್, ಮಗನ ಮೃತದೇಹವನ್ನು ಮನೆಯಿಂದ ಹೊರಕ್ಕೆ ಎಳೆದು ತಂದಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಬಾಳೂರು ಠಾಣೆಯ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದರು. ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ತಂದೆ ರಮೇಶ್ರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಎಣ್ಣೆ ವಿಚಾರಕ್ಕೆ ಮಗನ ಕೊಲೆ ಮಾಡಿರುವುದಾಗಿ ರಮೇಶ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ
‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ’ ಎಂಬ ಮಾತಿನಂತೆ ಮಗನನ್ನು ಚೆನ್ನಾಗಿ ಬೆಳೆಸಿ ಬುದ್ಧಿವಂತನನ್ನಾಗಿ ಮಾಡಬೇಕಿದ್ದ ಅಪ್ಪನೇ ತನ್ನ ಜೊತೆಗೆ ಕೂರಿಸಿಕೊಂಡು ಕುಡಿಯೋದನ್ನ ಕಲಿಸಿ, ಇದೀಗ ತಾವೇ ತಮ್ಮ ಮಗನನ್ನ ಕೊಲೆ ಮಾಡಿರುವುದು ಮಾತ್ರ ದುರಂತವೇ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Mon, 5 January 26
