ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮದುವೆಗೆ ಒಪ್ಪದ ಮಹಿಳೆಯನ್ನು ಯುವಕನೊಬ್ಬ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾದ ಘಟನೆ ಶನಿವಾರ ನಡೆದಿದೆ. ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಹತ್ಯೆಯಾದ ಮಹಿಳೆಯಾಗಿದ್ದು, 10 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ನಂತರ ರಫೀಕ್ ಎಂಬಾತನ ಜತೆ ಸ್ನೇಹ ಮೂಡಿ ಅದು ಪ್ರೀತಿಗೆ ತಿರುಗಿದ್ದು, ಈಗ ದಾರುಣ ಅಂತ್ಯ ಕಾಣುವಂತಾಗಿದೆ.

ಕಾರವಾರ, ಜನವರಿ 3: ಮದುವೆಗೆ ಒಪ್ಪದ ಮಹಿಳೆಯನ್ನು ಯುವಕನೊಬ್ಬ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ನಡೆದಿದೆ. ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಹತ್ಯೆಯಾದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ರಫೀಕ್ ಎಂಬ ಯುವಕ ರಂಜಿತಾಳನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಸುಮಾರು ಹತ್ತು ವರ್ಷಗಳ ಹಿಂದೆ ರಂಜಿತಾಳಿಗೆ ವಿಚ್ಛೇದನವಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ. ರಂಜಿತಾ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ವಿವಾಹ ವಿಚ್ಛೇದನದ ಬಳಿ ಮೂಡಿತ್ತು ಪ್ರೀತಿ
ವಿಚ್ಛೇದನದ ಕೆಲ ತಿಂಗಳ ಬಳಿಕ ರಫೀಕ್ ಮತ್ತು ರಂಜಿತಾಳ ನಡುವೆ ಗೆಳೆತನ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಇಬ್ಬರ ಕುಟುಂಬಗಳ ನಡುವೆ ಸಹ ಒಳ್ಳೆಯ ಬಾಂಧವ್ಯ ಇತ್ತು. ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ, ಇತ್ತೀಚಿನ ಕೆಲ ತಿಂಗಳಿಂದ ರಫೀಕ್ ಮದುವೆಯಾಗುವಂತೆ ರಂಜಿತಾಳ ಮೇಲೆ ಒತ್ತಡ ಹೇರುತ್ತಿದ್ದ. ಇದಕ್ಕೆ ರಂಜಿತಾ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿ, ‘ನಾನು ಈಗಾಗಲೇ ಮದುವೆಯ ಅನುಭವಿಸಿದ್ದು ಸಾಕು. ನನಗೆ ಮತ್ತೆ ಮದುವೆ ಇಷ್ಟವಿಲ್ಲ. ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ’ ಎಂದು ಹೇಳಿದ್ದಳು.
ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿ
ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ, ರಫೀಕ್ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ, ‘ಮದುವೆಯಾಗುತ್ತೀಯೋ ಇಲ್ಲವೋ’ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ರಂಜಿತಾ ಕೋಪದಿಂದ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಕೋಪಗೊಂಡ ರಫೀಕ್ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಇದನ್ನೂ ಓದಿ: ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ!
ಗಂಭೀರವಾಗಿ ಗಾಯಗೊಂಡ ರಂಜಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ರಫೀಕ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.



