ಬೆಳ್ಳಂ ಬೆಳಿಗ್ಗೆ ಬಿರಿಯಾನಿ ತಿನ್ನಲು ಹೋದವರಿಗೆ ಭರ್ಜರಿ ಶಾಕ್: ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ
ಹೊಸಕೋಟೆ ಬಿರಿಯಾನಿ ತಿನ್ನಲು ಹೋಗಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಮೊಬೈಲ್ ಬೈಕ್ ಕಿತ್ತುಕೊಂಡು ಅಟ್ಟಹಾಸ ಮೆರೆದಿದ್ದಾರೆ. ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡಿದ್ದಲ್ಲದೆ, ಅವರನ್ನು ಒಂದು ಗಂಟೆ ಕಾಲ ಒತ್ತೆಯಾಳಾಗಿ ಕೂಡ ಇಟ್ಟುಕೊಂಡಿದ್ದರು ಎನ್ನಲಾಗಿದೆ. ದರೋಡೆಕೋರರ ಪೈಕಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ.

ಬೆಂಗಳೂರು, ಡಿಸೆಂಬರ್ 23: ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನ ದರೋಡೆ ಮಾಡಿದ್ದಲ್ಲದೆ, ಒತ್ತೆಯಾಳಾಗಿ ಇಟ್ಟುಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ವಿದ್ಯಾರ್ಥಿಗಳ ಸ್ನೇಹಿತರಿಂದಲೂ ಹಣ ಪೀಕಿದ ದುಷ್ಕರ್ಮಿಗಳು
ಬಾಗಲೂರು ವ್ಯಾಪ್ತಿಯ ಪ್ರತಿಷ್ಟಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಭಾನುವಾರ ಮುಂಜಾನೆ ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದರು. ಬಿರಿಯಾನಿ ತಿಂದು ವಾಪಾಸ್ ಬರುವಾಗ ಆರು ಗಂಟೆ ಸುಮಾರಿಗೆ ಮೇಡಹಳ್ಳಿ ಬಳಿ ಆರೇಳು ಮಂಂದಿ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ವಿದ್ಯಾರ್ಥಿಗಳ ಎರಡು ಬೈಕ್‌ಗಳನ್ನು ಕಸಿದುಕೊಂಡು, ಮೊಬೈಲ್‌ಗಳನ್ನು ಕಿತ್ತಿಟ್ಟುಕೊಂಡು ಸುಲಿಗೆ ಮಾಡಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್‌ನಲ್ಲಿದ್ದ 1,800 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಯುಪಿಐ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ವಿದ್ಯಾರ್ಥಿಗಳನ್ನು ಸುಮಾರು 1 ಗಂಟೆ ಕಾಲ ಒತ್ತೆಯಾಳಗಿಸಿ ಇಟ್ಟುಕೊಂಡಿದ್ದಾರೆ. ಅವರ ಸ್ನೇಹಿತರಿಗೂ ಕರೆ ಮಾಡಿಸಿ ಹಣ ಪೀಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್
ಘಟನೆ ಬೆನ್ನಲ್ಲೇ ಎಚ್ಚೆತ್ತ ವಿದ್ಯಾರ್ಥಿಗಳ ಸ್ನೇಹಿತರು ಬಾಗಲೂರು ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಖಾಕಿ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಬರ್ತಿದಂತೆ ವಿದ್ಯಾರ್ಥಿಗಳನ್ನು ಬಿಟ್ಟು ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಕೆ.ಜಿ. ಹಳ್ಳಿಯ ಅರ್ಫಾತ್ ಅಹಮದ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳು ನೀಡಿದ ದೂರಿನ ಅನ್ವಯ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



