ಸ್ನೇಹಿತರಿಂದಲೇ ರೌಡಿಶೀಟರ್ನ ಡೆಡ್ಲಿ ಮರ್ಡರ್: ಹಣದ ವಿಷಯಕ್ಕೆ ಹರಿದಿದ್ದು ನೆತ್ತರು
ನೆಲಮಂಗಲದ ಬಾಲಾಜಿ ಫಾರ್ಮ್ ಹೌಸ್‌ನಲ್ಲಿ ರೌಡಿಶೀಟರ್ ಆಟೋ ನಾಗ ಅವರನ್ನು ಸ್ನೇಹಿತರೇ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹಣದ ವಿಚಾರವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪಾರ್ಟಿ ಮಾಡಿದ ನಂತರ ಕುಡಿದ ಮತ್ತಿನಲ್ಲಿದ್ದ ನಾಗನನ್ನು ಸ್ನೇಹಿತರು ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

ನೆಲಮಂಗಲ, ಜನವರಿ 25: ಮಾರಕಾಸ್ತ್ರಗಳಿಂದ ಇರಿದು ಸ್ನೇಹಿತರೇ ರೌಡಿಶೀಟರ್ನೋರ್ವನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನೆಲಮಂಗಲ ಬಳಿಯ ಬಾಲಾಜಿ ಫಾರ್ಮ್ ಹೌಸ್‌ನಲ್ಲಿ ನಡೆದಿದೆ. ಲಗ್ಗೆರೆ ಮತ್ತು ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಟೋ ನಾಗ ಕೊಲೆಯಾದ ವ್ಯಕ್ತಿಯಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಣದ ವಿಚಾರಕ್ಕೆ ಮರ್ಡರ್ ನಡೆದಿದೆ ಎನ್ನಲಾಗಿದೆ.
ಮೊದಲು ಪಾರ್ಟಿ, ಆಮೇಲೆ ಮರ್ಡರ್!
ಗಂಗೊಂಡಹಳ್ಳಿಯಲ್ಲಿದ್ದ ನಾಗ ಇಂದು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಮುಂದಾಗಿದ್ದ. ಹೀಗಾಗಿ ಮಧ್ಯಾಹ್ನ 2.30ರ ವೇಳೆಗೆ ಬಾಲಾಜಿ ಫಾರ್ಮ್ ಹೌಸ್ಗೆ ಬಂದಿದ್ದ. ಸ್ನೇಹಿತರ ಜೊತೆಗೆ ಕೂತು ಚೆನ್ನಾಗಿ ಮದ್ಯವನ್ನೂ ಸೇವಿಸಿದ್ದ. ಎಲ್ಲರೂ ಒಟ್ಟಾಗಿ ಒಂದೇ ತಟ್ಟೆಯಲ್ಲಿ ಊಟವನ್ನೂ ಮಾಡಿದ್ದರು. ಆದರೆ ಬಳಿಕ ನಡೆಯಬಾರದ್ದು ನಡೆದಿದೆ. ನಾಗ ಕುಡಿದ ಮತ್ತಲ್ಲಿ ಇರುವಾಗ ಸ್ನೇಹಿತರೇ ಆತನನ್ನು ಡ್ರಾಗರ್ನಿಂದ ಇರಿದು ಕೊಂದಿದ್ದಾರೆ. ಘಟನೆ ಸಂಬಂಧ ಎಸಿಪಿ ಅಶೋಕ್ ಹಾಗೂ ಇನ್ಸ್ಪೆಕ್ಟರ್ ಮುರುಳಿಧರ್ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಡಾನ್ ರೀತಿ ಗನ್ ಹಿಡಿದು ಆವಾಜ್ ಹಾಕಿದ್ದ ರೌಡಿಶೀಟರ್ ತಂದಿದ್ದು ನಕಲಿ ಬಂದೂಕು!
ಹಣದ ವಿಚಾರಕ್ಕೆ ಹರಿದ ನೆತ್ತರು
ಸ್ನೇಹಿತ ಅಭಿ ಎಂಬಾನಿಗೆ ಅಂದರ್ ಬಾಹರ್ ಹಣದಲ್ಲಿ ನಾಗ 22 ಲಕ್ಷ ಸಾಲ ನೀಡಿದ್ದ. ಆದ್ರೆ ಕೊಟ್ಟ ಹಣ ಹಿಂದಿರುಗಿಸುವಂತೆ ನಾಗ ಇತ್ತೀಚೆಗೆ ಕೇಳಿದ್ದು, ಹಣ ವಾಪಸ್ ಕೊಡಲು ಸಾಧ್ಯವಾಗದ ಕಾರಣ ಕೊಲೆಗೆ ಸ್ಕೆಚ್ ರೆಡಿಯಾಗಿತ್ತು. ಇಂದು ಪಾರ್ಟಿ ಮಾಡಿ ಮಾತನಾಡುವ ನೆಪದಲ್ಲಿ ನಾಗನನ್ನು ಕರೆಸಿಕೊಂಡಿದ್ದ ಆರೋಪಿಗಳು ಮರ್ಡರ್ ಮಾಡಲು ಸಿದ್ಧವಾಗಿಯೇ ಬಂದಿದ್ದರು. ನಾಗ ಹಾಗೂ ಆರೋಪಿಗಳು ಸೇರಿ ಎರಡು ರೂಂಗಳನ್ನು ಬುಕ್ ಮಾಡಿದ್ದರು. ನಾಗ ಬಂದ ಬಳಿಕ ಚೆನ್ನಾಗಿ ಪಾರ್ಟಿ ಮಾಡಿದ್ದು, ಬಳಿಕ ಪ್ಲ್ಯಾನ್ನಂತೆ ಆತನನ್ನು ಇರಿದು ಕೊಲ್ಲಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
