ಬಿಜೆಪಿಗೆ ಆಘಾತ: ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಹೆಸರಿನ ಮತ್ತೋರ್ವ ವ್ಯಕ್ತಿ ಸ್ಪರ್ಧೆ
ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಚುನಾವಣಾ ಕಣ ರಂಗೇರಿದೆ. ಅದರಂತೆ ಪ್ರಮುಖ ಕ್ಷೇತ್ರಗಳಲ್ಲೊಂದಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿ ಹೊರಹೊಮ್ಮಿದೆ. ಇದೀಗ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ವಿರುದ್ದ ಕಣಕ್ಕಿಳಿಯಲು ಅದೇ ಹೆಸರಿನ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಹೋರಾಟಗಾರ ಡಾ. ಸಿಎನ್ ಮಂಜುನಾಥ್ ಎಂಬುವವರು ಸ್ಪರ್ಧಿಸುವುದಾಗಿ ಮಾಹಿತಿ ನೀಡಿದ್ದಾರೆ. ಇದೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ಗ್ರಾಮಾಂತರ, ಮಾ.28: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಖ್ಯಾತ ವೈದ್ಯ, ಡಾ. ಸಿಎನ್ ಮಂಜುನಾಥ್(C. N. Manjunath) ಕಣಕ್ಕಿಳಿಯಲು ಅಣಿಯಾಗಿದ್ದು, ಕಾಂಗ್ರೆಸ್ ಸಂಸದ ಡಿಕೆ ಸುರೇಶ್(DK Suresh) ವಿರುದ್ದ ಪ್ರಭಲ ಪೈಪೊಟಿ ನೀಡಲು ಸಜ್ಜಾಗಿದ್ದಾರೆ. ಈ ಮಧ್ಯೆ ಮೂಲತಃ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಚೊಳೇನಹಳ್ಳಿ ಗ್ರಾಮದ ಡಾ.ಸಿ.ಎನ್. ಮಂಜುನಾಥ್ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರ ತಾಲ್ಲೂಕಿನವರೇ ಆದ ಅದೇ ಅದೇ ಹೆಸರಿನ ವ್ಯಕ್ತಿಯೊಬ್ಬರು ಕಣಕ್ಕಿಳಿಯೊದಾಗಿ ಘೋಷಣೆ ಮಾಡಿದ್ದಾರೆ. ಅಂದರೆ ಮತ್ತೊಬ್ಬ ಡಾ.ಸಿ.ಎನ್. ಮಂಜುನಾಥ್ ಎಂಬವವರು ಚುನಾವಣಾ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಸ್ಪರ್ಧೆ ಒಡ್ಡಲು ಅದೇ ಹೆಸರಿನ ಗೌರವ ಡಾಕ್ಟರೇಟ್ ಮೂಲಕ ತಮ್ಮ ಹೆಸರಿನ ಮುಂದೆ ಡಾಕ್ಟರ್ ಹೊಂದಿರುವ ಡಾ.ಸಿ.ಎನ್.ಮಂಜುನಾಥ್ ಎಂಬುವವರು ಬಹುಜನ ಭಾರತ್ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿರೊದಾಗಿ ಘೋಷಣೆ ಮಾಡಿದ್ದು ತೀವೃ ಕುತೂಹಲ ಮೂಡಿಸಿದೆ. ಅಚ್ಚರಿಯ ಸಂಗತಿಯೆಂದರೆ ಒಂದೇ ಹೆಸರು ಹೊಂದಿರುವ ಇಬ್ಬರು ಮಂಜುನಾಥ್ ಅವರುಗಳ ತಂದೆಯ ಹೆಸರೂ ಒಂದೇ ಆಗಿದ್ದು, ಒಂದೇ ಜಿಲ್ಲೆ, ಒಂದೇ ತಾಲ್ಲೂಕಿನವರಾಗಿರೋದು ಕೂಡ ಪರಿಣಾಮ ಬೀರಬಹುದೇ ಎನ್ನೋ ಚರ್ಚೆ ಹುಟ್ಟು ಹಾಕಿದೆ. ಇಬ್ಬರಲ್ಲಿ ಒಬ್ಬರು ವೃತ್ತಿಯಿಂದ ವೈದ್ಯರು, ಮತ್ತೊಬ್ಬರು ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪಡೆದಿರುವವರು ಎಂಬುದಷ್ಟೇ ವ್ಯತ್ಯಾಸವಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದಲಿತ ಮತಗಳೇ ನಿರ್ಣಾಯಕವಾಗಿವೆ. ಏ.2 ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರಕ್ಕೆ ಅರೆಸೇನಾ ಪಡೆ ಭದ್ರತೆ ಬೇಕು: ಕುಮಾರಸ್ವಾಮಿ ಬೇಡಿಕೆ, ಕೊಟ್ಟ ಕಾರಣ ಇಲ್ಲಿದೆ
ಮತದಾರರಲ್ಲಿ ಗೊಂದಲ
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಇಂತಹದೊಂದು ಘಟನೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆದಿತ್ತು. ಹೌದು, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರ ಗೆಲುವಿಗಾಗಿ, ಪ್ರತಿಸ್ಪರ್ಧಿಯಾಗಿದ್ದ ಸುಮಲತಾ ಅವರನ್ನು ಸೋಲಿಸಲು, ಅವರ ಹೆಸರಿನವರನ್ನೇ ನಾಲ್ಕು ಮಹಿಳೆಯರನ್ನು ಕಣಕ್ಕೀಳಿಸಲಾಗಿತ್ತು. ಇದೀಗ ಅಂತಹುದೇ ಘಟನೆ ಮತ್ತೆ ಜರುಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಯಲ್ಲಿ ಗೆಲುವಿಗಾಗಿ ಇಂತಹ ಘಟನೆಗಳು ನಡೆಯುವುದು ಸರ್ವೇ ಸಾಮಾನ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:08 pm, Thu, 28 March 24