ನೆಲಮಂಗಲ: ಕುಟುಂಬಕ್ಕೆ ಆಧಾರವಾಗಿದ್ದ ಮಗ ಅಪಘಾತದಲ್ಲಿ ಸಾವು; ಮಗನ ಶವ ಕಂಡು ಗೋಳಾಡುತ್ತಿರುವ ಹೆತ್ತ ಕರುಳು
ಆತ ಕುಟುಂಬ ನಿರ್ವಹಣೆಗಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದ. ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಾ, ಅಕ್ಕನಿಗೆ ಮದುವೆ ಮಾಡಿ ತಂದೆಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸೋಕೆ ಎಂದು ಹಣ ಕೂಡಿಡುತ್ತಿದ್ದ. ಈ ವೇಳೆ ತಾಯಿ ಊರಿಗೆ ಕರೆದಳೆಂದು ತಾಯಿ ನೋಡಲು ಮಮತೆಯಿಂದ ಊರಿಗೆ ತೆರಳುತ್ತಿದ್ದವ ನಡುರಸ್ತೆಯಲ್ಲಿ ಅಪಘಾತಕ್ಕೀಡಾಗಿ, ಆಸ್ಪತ್ರೆಗಳ ಬಾಗಿಲಿಗೆ ಚಿಕಿತ್ಸೆಗೆಂದು ಅಲೆದು ಅಲೆದು ಪ್ರಾಣ ಬಿಟ್ಟಿದ್ದಾನೆ.
ಬೆಂಗಳೂರು ಗ್ರಾಮಾಂತರ: ಈ ಫೋಟೋದಲ್ಲಿರುವ ಯುವಕ 24 ವರ್ಷದ ಮಲ್ಲೇಶ್, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಈತ ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿಕೊಂಡು ತನ್ನ ಬೈಕ್‌ನಲ್ಲಿ ತನ್ನೂರಿಗೆ ತೆರಳುತಿದ್ದ ವೇಳೆ ಹಿಂಬದಿಯಿಂದ ಯಮಸ್ವರೂಪಿಯಾಗಿ ಬಂದ ಲಾರಿಯೊಂದು ಜಿಲ್ಲೆಯ ಬಿಲ್ಲಿನಕೋಟೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದ. ಬಳಿಕ ಗಾಯಾಳುವಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳ ಬಾಗಿಲು ತಟ್ಟಿದರೂ ಎಲ್ಲೂ ಚಿಕಿತ್ಸೆ ನೀಡದಿರುವುದರಿಂದ ಕೊನೆಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಚೆಲ್ಲಿದ್ದಾನೆ.
ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದ ಮಲ್ಲೇಶ್ ದುಡಿದು ತನ್ನ ಅಕ್ಕನ ಮದುವೆ ಸಹ ಮಾಡಿದ್ದ. ಇತ್ತ ತಂದೆ ಸಹ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರಿಂದ ತಂದೆಗೂ ಚಿಕಿತ್ಸೆ ಕೊಡಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ತಂದೆಯ ಚಿಕಿತ್ಸೆಗೆಂದು ಹಣ ಗಳಿಸಲು ಜೊಮೋಟೋದಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 5 ರಂದು ತಾಯಿ ಕರೆ ಮಾಡಿದಾಗ ಊರಿಗೆ ಬರ್ತಿನಿ ಎಂದಿದ್ದನಂತೆ. ಆದರೆ ಕೊನೆಗೆ ಮಗ ಊರಿಗೆ ಬರಲಿಲ್ಲ. ಮಗನ ಸಾವಿನ ಸುದ್ದಿ ತಾಯಿಗೆ ತಿಳಿದು ಹೆತ್ತ ಕರುಳನ್ನ ಕಳೆದುಕೊಂಡ ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ.
ಇದನ್ನೂ ಓದಿ:ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಚಾಕು ಇರಿದ ಅಪ್ರಾಪ್ತ ಬಾಲಕಿ
ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಆದೇನೇ ಆಗಲಿ ಮನೆಗೆ ಆಸರೆಯಾಗಬೇಕಿದ್ದವನನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ