ಹೆಂಡತಿ, ಸಂಬಂಧಿಕರನ್ನೂ ಬಿಡದೆ 20ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸುವುದಾಗಿ ಕೋಟಿ ವಂಚನೆ; ಖತರ್ನಾಕ್ ಆರೋಪಿಗಳು ಅರೆಸ್ಟ್

ಕೆಲ ವರ್ಷಗಳಿಂದ ಹೆಬ್ಬಗೋಡಿ ಸಮೀಪದ ವಿದ್ಯಾನಗರ ಲೇಔಟ್​ನಲ್ಲಿ ವಾಸವಿದ್ದ ವಂಚಕ ಮಂಜುನಾಥನ ಜೊತೆ ಮಹಿಳೆ ಗೀತಾ ಹಾಗೂ ಪುಟ್ಟಸ್ವಾಮಿ ಕೈ ಜೋಡಿಸಿದ್ದರು. ಈ ಮೂವರು ಸೇರಿಕೊಂಡು ಜನರಿಗೆ ಪಂಗನಾಮ ಹಾಕಿದ್ದಾರೆ. ಆರೋಪಿ ಮಂಜುನಾಥ್ ಹುಸ್ಕೂರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವುದಾಗಿ ಜನರನ್ನು ನಂಬಿಸಿದ್ದ. ಗೀತಾ ಎಂಬ ಮಹಿಳೆಯನ್ನ ಪರಿಚಯ ಮಾಡಿಕೊಟ್ಟು ಈಕೆ ಎಪಿಎಂಸಿಯ ಅಧಿಕಾರಿ ಎಂದು ನಂಬಿಸುತ್ತಿದ್ದ.

ಹೆಂಡತಿ, ಸಂಬಂಧಿಕರನ್ನೂ ಬಿಡದೆ 20ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸುವುದಾಗಿ ಕೋಟಿ ವಂಚನೆ; ಖತರ್ನಾಕ್ ಆರೋಪಿಗಳು ಅರೆಸ್ಟ್
ಮಂಜುನಾಥ್, ಗೀತಾ
Follow us
ರಾಮು, ಆನೇಕಲ್​
| Updated By: ಆಯೇಷಾ ಬಾನು

Updated on:Aug 29, 2023 | 10:01 AM

ಆನೇಕಲ್, ಆ.29: ಸಂಬಂಧಿಕರು, ಸ್ನೇಹಿತರನ್ನೂ ಲೆಕ್ಕಿಸದೆ ಸರ್ಕಾರಿ ಕೆಲಸ(Job Aspirants) ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆದು 20ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು(Hebbagodi Police) ಬಂಧಿಸಿದ್ದಾರೆ. ಮಂಜುನಾಥ್ ಹಾಗೂ ಗೀತಾ ಬಂಧಿತ ಆರೋಪಿಗಳು. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ತಿಪಟೂರಿನ ಅರಳಗುಪ್ಪೆ ಮೂಲದ ಮಂಜುನಾಥ್, ಗೀತಾ ಹಾಗೂ ಪುಟ್ಟಸ್ವಾಮಿ ಎಂಬ ಆರೋಪಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ಗೋವಾಗೆ ಎಸ್ಕೇಪ್ ಆಗಿದ್ದರು. ಮೋಸ ಹೋದ ಜನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗಳನ್ನ ಬಂಧಿಸಿ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಕೆಲ ವರ್ಷಗಳಿಂದ ಹೆಬ್ಬಗೋಡಿ ಸಮೀಪದ ವಿದ್ಯಾನಗರ ಲೇಔಟ್​ನಲ್ಲಿ ವಾಸವಿದ್ದ ವಂಚಕ ಮಂಜುನಾಥನ ಜೊತೆ ಮಹಿಳೆ ಗೀತಾ ಹಾಗೂ ಪುಟ್ಟಸ್ವಾಮಿ ಕೈ ಜೋಡಿಸಿದ್ದರು. ಈ ಮೂವರು ಸೇರಿಕೊಂಡು ಜನರಿಗೆ ಪಂಗನಾಮ ಹಾಕಿದ್ದಾರೆ. ಆರೋಪಿ ಮಂಜುನಾಥ್ ಹುಸ್ಕೂರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವುದಾಗಿ ಜನರನ್ನು ನಂಬಿಸಿದ್ದ. ಗೀತಾ ಎಂಬ ಮಹಿಳೆಯನ್ನ ಪರಿಚಯ ಮಾಡಿಕೊಟ್ಟು ಈಕೆ ಎಪಿಎಂಸಿಯ ಅಧಿಕಾರಿ ಎಂದು ನಂಬಿಸುತ್ತಿದ್ದ. ಇನ್ನು ವಿಪರ್ಯಾಸವೆಂದರೆ ವಂಚಕ ಮಂಜುನಾಥ್ ಸ್ವಂತ ಹೆಂಡತಿಯನ್ನೂ ಬಿಟ್ಟಿಲ್ಲ. ತನ್ನ ಹೆಂಡತಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಅತ್ತ-ಮಾವನಿಂದ 3ಲಕ್ಷ ಹಣವನ್ನ ಪಡೆದಿದ್ದ. ಬಳಿಕ ನಕಲಿ ಆರ್ಡರ್ ಕಾಪಿ ನೀಡಿ ವಂಚಿಸಿದ್ದ.

ಇದನ್ನೂ ಓದಿ: ದೇವನಹಳ್ಳಿ: ಕೋಟಿ ಆಸೆಗೆ ಉಂಡ ಮನೆಗೆ ಕನ್ನ ಹಾಕಲು ಯತ್ನಿಸಿ ಪೊಲೀಸರ ಅತಿಥಿಯಾದ ಕಾರ್ ಡ್ರೈವರ್ ಮತ್ತು ಸಹಚರರು

ಅಲ್ಲದೆ ತನ್ನ ಪತ್ನಿಯ ಸಂಬಂಧಿಕರಿಗೂ ಕೆಲಸ ಕೊಡಿಸುವುದಾಗಿ ಗಾಳ ಹಾಕಿದ್ದ. ಕೂಲಿನಾಲಿ ಮಾಡುತ್ತಿದ್ದ ಜನರನ್ನ ನಂಬಿಸಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಈ ರೀತಿ ಸುಮಾರು 20ಕ್ಕೂ ಹೆಚ್ಚು ಜನರನ್ನು ನಂಬಿಸಿ ಸುಮಾರು 60 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವುದು ಸದ್ಯ ಬಯಲಾಗಿದೆ. ವಂಚನೆಯ ಪಟ್ಟಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚನೆಗೆ ಒಳಗಾದವರು ಒಬ್ಬೊಬ್ಬರಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ.

ವಂಚನೆ ಮಾಡಿ ಗೋವಾಗೆ ಎಸ್ಕೇಪ್ ಆಗಿದ್ದ ಆರೋಪಿಗಳು

ಇನ್ನು ಈ ಆರೋಪಿಗಳು ಒಬ್ಬೊಬ್ಬರಿಂದ ಮೂರು ಲಕ್ಷದಿಂದ ಹತ್ತು ಲಕ್ಷದ ವರೆಗೆ ಹಣ ಪಡೆದಿದ್ದರು ಎಂದು ತಿಳಿದುಬಂದಿದೆ. ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ಹಣ ವಂಚನೆ ಮಾಡಿರುವ ಶಂಕೆ ಇದೆ. ಹುಸ್ಕೂರು, ಮೈಸೂರು, ಯಶವಂತಪುರ, ಸೇರಿದಂತೆ ಬೇರೆ ಬೇರೆ ಕಡೆಗಳ ಎಪಿಎಂಸಿಗಳಲ್ಲಿ ಬಿಲ್ ಕಲೆಕ್ಟರ್, ಡ್ರೈವರ್, ಆಫೀಸ್ ವರ್ಕ್ ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ. ಹಣ ಪಡೆದು ಎಲ್ಲರಿಗೂ ನಕಲಿ ಆರ್ಡರ್ ಕಾಪಿ ನೀಡಿದ್ದಾರೆ. ಆರ್ಡರ್ ಕಾಪಿಯಲ್ಲಿ ರಾಜು ಸಿ.ಆರ್. ಎಂದು ಸಹಿ ಮಾಡಿ ಸೀಲ್ ಹಾಕಲಾಗಿದ್ದು ಇದನ್ನು ಯಾರಿಗೂ ತೋರಿಸಬೇಡಿ ಎಂದು ಹೇಳಿದ್ದಾರೆ. ಯಾರಿಗೂ ಸಂಶಯ ಬಾರದಂತೆ ಎಪಿಎಂಸಿಯಲ್ಲಿನ ಕೆಲ ಬುಕ್ ಗಳನ್ನ ಇಟ್ಟುಕೊಂಡಿದ್ದ ಆರೋಪಿ ಮಂಜುನಾಥ್, ಕೆಲ ದಿನಗಳ ಕಾಲ ವರ್ಕ್ ಫ್ರಮ್ ಹೋಮ್ ಕೆಲಸ ಮಾಡಿ ಎಂದಿದ್ದ. ತಾನು ನೀಡುತ್ತಿದ್ದ ಬುಕ್​ಗಳಲ್ಲಿ ಪ್ರತಿನಿತ್ಯ ಎಂಟ್ರಿ ಮಾಡಲು ತಿಳಿಸಿದ್ದ. ಹಣ ಪಡೆದು ಹತ್ತಾರು ತಿಂಗಳು ಕಳೆದರೂ ಕೆಲಸಕ್ಕೆ ಸೇರಿಸದೆ ಇದ್ದಾಗ ಅನುಮಾನಗೊಂಡ ಜನರು ಮಂಜುನಾಥನ ಬೆನ್ನು ಬಿದಿದ್ದಾರೆ. ಆಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮಂಜುನಾಥ್ ಹಾಗೂ ಗೀತಾ ಗೋವಾಗೆ ಎಸ್ಕೇಪ್ ಆಗಿದ್ದರು. ಸದ್ಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:59 am, Tue, 29 August 23