ದೇವನಹಳ್ಳಿ: ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು(Students) ನೀರಿಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುವರಂಗ ಬ್ರಿಡ್ಜ್ ನಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಪಿಯು ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಾದ ಸುಪ್ರಿತಾ (18) ಮತ್ತು ರಾಜೇಶ್ವರಿ (18) ಆತ್ಮಹತ್ಯೆಗೆ ಶರಣಾದವರು.
ಇಂದು ಮಧ್ಯಾಹ್ನ ಮಾಲೂರು ಮೂಲದ ಸುಪ್ರಿತ ಮತ್ತು ಹೊಸಕೋಟೆ ತಾಲೂಕಿನ ಬಾಗೂರು ಮೂಲದ ರಾಜೇಶ್ವರಿ ಇಬ್ಬರೂ ಒಟ್ಟಿಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಓರ್ವ ಯುವತಿಯ ಮೃತದೇಹ ಪತ್ತೆ ಮಾಡಿದ್ದು ಮತ್ತೋರ್ವ ಯುವತಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕೊಳಚೆ ನೀರಿನಲ್ಲಿ ಬಿದ್ದ ಕಾರಣ ಮೃತದೇಹಗಳ ಪತ್ತೆ ಹಚ್ಚಲು ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ. ಅನುಗೊಂಡನಹಳ್ಳಿ ಪೊಲೀಸರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಗಿಣಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ
ಕಲಬುರಗಿ : ಚಿಂಚೋಳಿ ತಾಲೂಕಿನ ಜಟ್ಟೂರು ಬಳಿ ಕಾಗಿಣಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮಹಿಳೆಯ ಶವ ಎಲ್ಲಿಂದಲೋ ತೇಲಿಕೊಂಡು ಬಂದಿದೆ. ಮಹಿಳೆಯ ಶವ ಹೊರತಗೆಯಲು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರಿಂದ ಕಾರ್ಯಾಚರಣೆ ನಡೆಸಿದ್ದಾರೆ. ಸುಲೇಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರು ಡಿಕ್ಕಿಯಿಂದ 8 ವರ್ಷದ ಬಾಲಕಿಗೆ ಗಾಯ
ಬಾಗಲಕೋಟೆ: ಬಾಗಲಕೋಟೆ ನಗರದ ರೈಲ್ವೆ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು 8 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿದೆ. ಬಾಲಕಿ ಉಲ್ಪತ್‌ಗೆ ಗಂಭೀರ ಗಾಯಗಳಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಬಾಗಲಕೋಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೊಸಾಳಿ ರೈಲ್ವೆ ಹಳಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆ
ಉತ್ತರ ಕನ್ನಡ: ಕಾರವಾರ ತಾಲೂಕಿನ ಹೊಸಾಳಿ ರೈಲ್ವೆ ಹಳಿ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಮಹಿಳೆಯ ವಯಸ್ಸು ಸುಮಾರು 50 ವರ್ಷ ಎಂದು ಅಂದಾಜಿಸಲಾಗಿದೆ. ಮೃತ ಮಹಿಳೆಯ ದೇಹದ ಗುರುತು ಇನ್ನು ಪತ್ತೆಯಾಗಿಲ್ಲ. ಮಹಿಳೆ ಮೃತ ದೇಹವನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 8:33 pm, Tue, 26 July 22