BJP Janotsava: ಜುಲೈ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ: ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ

ನಮ್ಮ ಸರ್ಕಾರದ ಮೂರು ವರ್ಷ ಪೂರ್ತಿಗೆ ಜನೋತ್ಸವ ಹೆಸರಿನಲ್ಲಿ ಕಾರ್ಯಕ್ರಮವನ್ನು  ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ,  ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

BJP Janotsava: ಜುಲೈ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ: ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: ಅಕ್ಷಯ್​ ಕುಮಾರ್​​

Jul 26, 2022 | 2:23 PM

ಬೆಂಗಳೂರು: ಬಿಜೆಪಿ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ  ದೊಡ್ಡಬಳ್ಳಾಪುರದಲ್ಲಿ ಜುಲೈ 28ರಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ  ನಡೆಯಲಿರುವ ‘ಬಿಜೆಪಿ ಜನೋತ್ಸವ’ ಕಾರ್ಯಕ್ರಮಕ್ಕೆ ಈಗಾಗಲೇ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ಕುರಿತು ವಿವರ ನೀಡಿದ ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ.ಮಹೇಶ್, ನಮ್ಮ ಸರ್ಕಾರಕ್ಕೆ  ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನೋತ್ಸವ ಹೆಸರಿನ ಸಮಾವೇಶವನ್ನು ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಹಮ್ಮಿಕೊಳ್ಳಲಾಗಿದೆ.  ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ. ರವಿ ಭಾಗವಹಿಸುತ್ತಾರೆ ಹೇಳಿದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾಸರಹಳ್ಳಿ, ಯಲಹಂಕ, ಬ್ಯಾಟರಾಯನಪುರ ಭಾಗದ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ  ಸೇರಲಿದ್ದಾರೆ.  ನಡ್ಡಾ ಅವರು ಬಿಜೆಪಿಯ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಂಸತ್ ನಡೆಯುತ್ತಿರುವ ಕಾರಣ  ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿಲ್ಲ ಎಂದರು.

ಕಾಂಗ್ರೆಸ್​ನಿಂದ ವ್ಯಕ್ತಿಯ ಉತ್ಸವ: ಸುನಿಲ್ ಕುಮಾರ್ ವ್ಯಂಗ್ಯ

ನಾವು ಜನೋತ್ಸವ ಮಾಡುತ್ತೇವೆ, ಆದರೆ  ಕಾಂಗ್ರೆಸ್ ವ್ಯಕ್ತಿಯ ಉತ್ಸವ ಮಾಡುತ್ತಾ ಇದ್ದಾರೆ. ನಮಗೂ ಅವರಿಗೂ ಇಷ್ಟೇ ವ್ಯತ್ಯಾಸ,  ನಾವು ವಿಚಾರದ ಮೇಲೆ ಜನರ ಉತ್ಸವ ಮಾಡುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು. ಕಾರ್ಯಕ್ರಮ ಕುರಿತು ವಿವರ ನೀಡಿದ ಅವರು, ಜುಲೈ 28ರಂದು ಸರ್ಕಾರದ ಸಾಧನಾ ಸಮಾವೇಶ ಮಾಡುತ್ತೇವೆ,  ಬಳಿಕ ಎಲ್ಲಾ ಕಡೆಗಳಲ್ಲಿ ಜನೋತ್ಸವ ಕಾರ್ಯಕ್ರಮ ಮಾಡುತ್ತೇವೆ. ಸಿದ್ದರಾಮಯ್ಯ ತಾನು ಹೇಳಲು ಸಾಧ್ಯವಾಗದ್ದನ್ನು ಜಮೀರ್ ಅಹಮದ್ ಮೂಲಕ ಹೇಳಿಸಿದ್ದಾರೆ.  ನೋಟೀಸ್ ಕೊಟ್ಟಿರೋದು ಜಮೀರ್ ಅಹಮದ್ ಗೆ ಅಲ್ಲ, ಕಾಂಗ್ರೆಸ್ ಹೈಕಮಾಂಡ್ ಜಮೀರ್ ಅಹಮದ್ ಮೂಲಕ ಸಿದ್ದರಾಮಯ್ಯಗೆ ನೊಟೀಸ್ ನೀಡಿದೆ ಎಂದರು.

ಬಿಜೆಪಿ ಸರ್ಕಾರದ ಮೂರು ವರ್ಷ, ಬೊಮ್ಮಾಯಿ ಸರ್ಕಾರದ ಒಂದು ವರ್ಷ ಹಿನ್ನೆಲೆಯಲ್ಲಿ ಈ  ಜನೋತ್ಸವ ಆಯೋಜನೆ ಮಾಡಲಾಗಿದೆ.  ಜನೋತ್ಸವದ ಮೂಲಕ ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತೇವೆ, ನಮ್ಮದು ಜನೋತ್ಸವ, ಕಾಂಗ್ರೆಸ್ ನದ್ದು ಸಿದ್ದರಾಮೋತ್ಸವ. ಬಿಜೆಪಿಯ ಜನೋತ್ಸವವನ್ನು ರಾಜ್ಯದ ಜನ ಒಪ್ಪಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತನೂ ಯಾವುದೇ ಹುದ್ದೆಗೆ ಹೋಗಬಹುದು. ಒಬ್ಬ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿಸಿದ್ದೇವೆ. ಇದನ್ನು ನೋಡಿದರೆ ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶ ಇದೆ ಎನ್ನುವುದು ಅರ್ಥವಾಗುತ್ತದೆ. ನಾವು ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸಂವಿಧಾನಕ್ಕೆ, ಕಾನೂನಿಗೆ ಬೆಲೆ ಕೊಡುವುದಿಲ್ಲ. ಹೀಗಾಗಿ ಅವರು ವಿಚಾರಣೆಗೆ ಅಡ್ಡಿ‌ಪಡಿಸುತ್ತಿದ್ದಾರೆ. ಭಯ ಇಲ್ಲದವರು ವಿಚಾರಣೆ ಎದುರಿಸುತ್ತಾರೆ.  ಭಯ ಇದ್ದವರು ವಿಚಾರಣೆಗೆ ಅಡ್ಡಿಪಡಿಸುತ್ತಾರೆ. ನಾವು ಇವರೆಲ್ಲರಿಂದಾಗಿ ಆಸ್ತಿ ಮಾಡಿದ್ದೇವೆ ಅಂತ ರಮೇಶ್ ಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಒಂದು ಕಡೆ ಭ್ರಷ್ಟಾಚಾರ ಮಾಡಿ, ಮತ್ತೊಂದು ಕಡೆ ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ.  ಇನ್ನೊಂದು ಕಡೆ ಈ ರೀತಿ ಪ್ರತಿಭಟನೆ ಮಾಡುತ್ತಾರೆ. ಕಾಂಗ್ರೆಸ್​ಗೆ ಸ್ಪಷ್ಟತೆ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಜಮೀರ್ ಹೇಳಿಕೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಕ್ಷೇಪ

ಒಕ್ಕಲಿಗ ಸಮುದಾಯ ಕುರಿತು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ನೀಡಿರುವ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದರು. ಸಮುದಾಯಗಳ ನಡುವೆ ಹೋಲಿಕೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಒಕ್ಕಲಿಗ ಸಮುದಾಯದವರು ಜಮೀರ್ ಹೇಳಿಕೆಯನ್ನು ವಿರೋಧಿಸಿದ್ದಾರೆ.  ಹೋಲಿಕೆ ಮಾಡಿ ವರ್ಗೀಕರಣ ಮಾಡುವುದು ಖಂಡನೀಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವುದೇ ಕಾಂಗ್ರೆಸ್ ನ ಪರಿಪಾಠವಾಗಿದೆ. ಅದು ಹುಟ್ಟುಗುಣ. ಮೊದಲು ಜಾತಿಜಾತಿಗಳ‌ ಮಧ್ಯೆ ಕಂದಕ‌ ತೋಡುವ ಕೆಲಸ ಮಾಡಿ, ಈಗ‌ ಭಾರತ್ ಜೋಡೋ‌ ಕೆಲಸ ಮಾಡುತ್ತಿದ್ದಾರೆ. ಇದು ಹಾಸ್ಯಸ್ಪದವಾಗಿದೆ ಎಂದರು. ಬಿಎಸ್​ವೈ ಪುತ್ರ  ವಿಜಯೇಂದ್ರ ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಸಿಗಲಿದೆ. ವಿಜಯೇಂದ್ರಗೆ ಎಲ್ಲಿ ಹೇಗೆ ಯಾವ ಸ್ಥಾನಮಾನ ಕೊಡಬೇಕು ಎಂಬುದನ್ನು ನಮ್ಮ ಹೈಕಮಾಂಡ್ ಬಿಎಸ್​ವೈ‌ ಜೊತೆಗೆ ಚರ್ಚಿಸಿ ನಿರ್ಧರಿಸಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಪರಿಚಯಾತ್ಮಕ ಸಭೆ 

ಇದನ್ನೂ ಓದಿ

ಬಿಜೆಪಿಯ ನೂತನ ರಾಜ್ಯ ಸಂಘಟನಾ ಪ್ರಧಾನ‌ ಕಾರ್ಯದರ್ಶಿ ರಾಜೇಶ್ ಕುಂತೂರು ಅವರಿಗೆ ಬಿಜೆಪಿಯ ಜಿಲ್ಲಾಧ್ಯಕ್ಷರು, ವಿಭಾಗ ಉಸ್ತುವಾರಿಗಳು, ಪ್ರಕೋಷ್ಠಗಳ ಮುಖಂಡರನ್ನು ಪರಿಚಯಿಸಲೆಂದು ವಿಶೇಷ ಸಭೆ ಕರೆಯಲಾಗಿದೆ. ಶೀಘ್ರದಲ್ಲಿಯೇ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada