Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಅಡ್ಡಾದಿಡ್ಡಿ ಗುಂಡಿನ ಹಾರಾಟಕ್ಕೆ ಐವರು ಮೃತಪಟ್ಟಿದ್ದು, ಸುಮಾರು 16 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ
ಅಮೆರಿಕದ ಚಿಕಾಗೊ ನಗರದಲ್ಲಿ ಅಡ್ಡಾದಿಡ್ಡಿ ಗುಂಡು ಹಾರಾಟ ನಡೆದಿದೆ.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 13, 2022 | 7:35 AM

ಚಿಕಾಗೊ: ಬಂದೂಕು ಬಳಕೆಗೆ ಕಡಿವಾಣ ಹಾಕುವ ಬಗ್ಗೆ, ಲೈಸೆನ್ಸ್​ ನಿಯಮಗಳಿಗೆ ಕಠಿಣ ನಿಯಮಗಳನ್ನು (Gun Culture) ವಿಧಿಸುವ ಬಗ್ಗೆ ಅಮೆರಿಕಲ್ಲಿ ಚರ್ಚೆ ನಡೆಯುತ್ತಿದೆ. ಈ ನಡುವೆ ಚಿಕಾಗೊ ನಗರದಲ್ಲಿ (Chicago Shootings) ಶುಕ್ರವಾರ ಮತ್ತು ಶನಿವಾರವೂ ಗುಂಡಿನ ಹಾರಾಟದ ಹಲವು ಘಟನೆಗಳು ವರದಿಯಾಗಿವೆ. ಅಡ್ಡಾದಿಡ್ಡಿ ಗುಂಡಿನ ಹಾರಾಟಕ್ಕೆ ಐವರು ಮೃತಪಟ್ಟಿದ್ದು, ಸುಮಾರು 16 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 12:19ಕ್ಕೆ 37 ವರ್ಷದ ಮಹಿಳೆಯನ್ನು ಸೌತ್ ಅಲ್​ಬಾನಿ ಎಂಬಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಮಹಿಳೆಯು ಕಾರಿನಲ್ಲಿ ಬರುತ್ತಿದ್ದ ಆಕೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ, ಪರಾರಿಯಾಗಿದ್ದಾರೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಸೌತ್ ಇಂಡಿಯಾನಾದ ಜನವಸತಿ ಪ್ರದೇಶದಲ್ಲಿಯೂ ನಸುಕಿನ 2:27ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಅವರನ್ನು ತಕ್ಷಣ ಚಿಕಾಗೊ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಕೆಲವೇ ನಿಮಿಷಗಳಲ್ಲಿ ಅವರು ಮೃತಪಟ್ಟರು. ಸೌತ್ ದಾಮೆನ್ ಎಂಬಲ್ಲಿ ಸಂಜೆ 3:20ಕ್ಕೆ ಗುಂಡಿನ ದಾಳಿ ನಡೆದಿದೆ. ಈ ಪ್ರಕರಣದಲ್ಲಿ 23 ವರ್ಷದ ಪುರುಷ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದರು. ನಾಲ್ವರು ಒಂದೆಡೆ ನಿಂತಿದ್ದಾಗ ಕಾರೊಂದು ಅವರ ಕಡೆಗೆ ಧಾವಿಸಿ ಬಂತು. ಅದರೊಳಗಿದ್ದವನೊಬ್ಬ ಬಂದೂಕು ತೋರಿಸಿ ಗುಂಡು ಹಾರಿಸಲು ಆರಂಭಿಸಿದ. ತೀವ್ರವಾಗಿ ಗಾಯಗೊಂಡಿದ್ದ 23 ವರ್ಷದ ಪುರುಷ ಅಡ್ವೊಕೇಟ್ ಕ್ರೈಸ್ಟ್ ವೈದ್ಯಕೀಯ ಕೇಂದ್ರದಲ್ಲಿ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.

39, 42 ಮತ್ತು 24 ವರ್ಷದ ಪುರುಷರ ಮೇಲೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಗುಂಡಿನ ಹಾರಾಟ ನಡೆದಿದೆ. ಗಾಯಗೊಂಡಿರುವ ಇವರೆಲ್ಲರೂ ತಕ್ಷಣಕ್ಕೆ ಉತ್ತಮ ಚಿಕಿತ್ಸೆ ದೊರೆತ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ವಾರಾಂತ್ಯದ ಮೊದಲ ಗುಂಡಿನ ಹಾರಾಟವು ಶುಕ್ರವಾರ ಸಂಜೆ 5:02ಕ್ಕೆ ನಡೆಯಿತು. ಸೌತ್ ಜಸ್ಟಿನ್ ಸಮೀಪ ನಡೆದ ಈ ಘಟನೆಯಲ್ಲಿ 25 ವರ್ಷದ ಪುರುಷ ಮೃತಪಟ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ರಾತ್ರಿ 11:05ಕ್ಕೆ ವರದಿಯಾದ ಮತ್ತೊಂದು ಪ್ರಕರಣದಲ್ಲಿ 26 ವರ್ಷದ ಪುರುಷ ಗುಂಡೇಟಿನಿಂದ ಮೃತಪಟ್ಟಿದ್ದಾನೆ.

ಚಿಕಾಗೊ ಗುಂಡು ಹಾರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಅಡ್ಡಾದಿಡ್ಡಿ ಗುಂಡು ಹಾರಿಸಿ, ಬೇಕಾಬಿಟ್ಟಿಯಾಗಿ ಜನರನ್ನು ಕೊಲ್ಲುವುದು ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಒತ್ತಾಯ ಜನರಿಂದ ಕೇಳಿಬರುತ್ತಿದೆ. ಆದರೆ ಅಮೆರಿಕದ ಪ್ರಬಲ ಗನ್ ಲಾಬಿ ಇದಕ್ಕೆ ಅವಕಾಶ ಕೊಡುತ್ತಿಲ್ಲ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada