ಹೇಳಿ ಕೇಳಿ ಅದು ಒಂಟಿ ಸಲಗ ತಿರುಗಾಡೋ ಜಾಗ, ಆದ್ರೂ ಆ ತಾಯಿ ತನ್ನ ಮಗನಿಗೆ ಹಸಿವಾಗಿದೆ ಅಂತ ಊಟ ಕೊಡಲು ಹೊರಟೇ ಬಿಟ್ಳು, ಇನ್ನೇನು ಮಗನಿಗೆ ಬುತ್ತಿ ಕೈ ಸೇರಬೇಕು, ಅದಕ್ಕೂ ಮಂಚೆ ಆ ತಾಯಿ ಕಾಡಾನೆ ದಾಳಿಗೆ (Wild Elephant Attack) ಸಿಲುಕಿ ದುರ್ಮಣಕ್ಕಿಡಾಗಿದ್ದಾಳೆ. ಹೌದು, ಇಂತಹ ದಾರುಣ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ (Bannerghatta National Park) ಸಮೀಪ ಇರುವ ಈ ಹಳ್ಳಿಗೆ ಮೊದಲಿನಿಂದಲೂ ಚಿರತೆ, ಹುಲಿ, ಆನೆಗಳ ಕಾಟ ಇದ್ದಿದ್ದೇ. ಆದರೆ ಕಾಡು ಪ್ರಾಣಿಗಳಿಂದ ಅಷ್ಟಾಗಿ ಸಾವು ನೋವು ಸಂಭವಿಸಿರಲಿಲ್ಲ, ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿರುವ ಒಂಟಿ ಸಲಗ ಹಲವಾರು ಬಾರಿ ಮನುಷ್ಯರ ಮೇಲೆ ಅಟ್ಯಾಕ್ ಮಾಡಿದೆ. ಮಗನಿಗಾಗಿ ಬುತ್ತಿ ಕೊಡಲು ಹೊರಟಿದ್ದ 48 ವರ್ಷದ ನಾಗಮ್ಮ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾಳೆ. ಆನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ (Death) ತನ್ನ ತಾಯಿಯ (Mother) ಸ್ಥಿತಿ ನೋಡಿ ಮಗನ ಆಕ್ರಂದನ ಮುಗಿಲು ಮುಟ್ಟಿತ್ತು.
ಕೆಲ ದಿನಗಳ ಹಿಂದಷ್ಟೇ ವಾಕಿಂಗ್ ಮಾಡಲು ತೆರಳಿದ್ದವರ ಮೇಲೆ ಅಟ್ಯಾಕ್ ಮಾಡಿದ್ದ ಈ ಒಂಟಿ ಸಲಗ ಅವರನ್ನು ತನ್ನ ಕಾಲ ಕೆಳಗೆ ತುಳಿಯಲು ಹವಣಿಸಿತ್ತು. ಹೀಗಾಗಿ ಹಳ್ಳಿಗರು ಸಂಜೆಯಾದರೇ ಸಾಕು ಹೊರ ಬರುತ್ತಿರಲಿಲ್ಲ, ಹಾಗೆಯೇ ಒಂಟಿಯಾಗಿ ಓಡಾಡಲೂ ಹೆದರುತ್ತಿದ್ರು, ಇದರ ಮಧ್ಯೆ ನಾಗಮ್ಮ ಅದ್ಯಾವುದನ್ನೂ ಲೆಕ್ಕಿಸದೇ ತನ್ನ ಮಗನಿಗೆ ಹಸಿವಾಗಿದೆ, ಬೇಗ ಟಿಫೀನ್ ಕೊಡಬೇಕು ಅಂತ ಹೊರಟಿದ್ದಾಳೆ.
ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಹಿಂಭಾಗ ಹೋಗುತ್ತಿದ್ದಂತೆ ಗಿಡ ಮರಗಳ ಮಧ್ಯೆಯಿಂದ ಬಂದ ಕಾಡಾನೆ ಸೊಂಡಿಲಿನಿಂದ ಅಟ್ಯಾಕ್ ಮಾಡಿದೆ. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಹಳ ಹೊತ್ತಾದ್ರೂ ತಾಯಿ ಬರಲಿಲ್ಲ ಅಂತ ಹುಡುಕುತ್ತಿದ್ದ ಕುಟುಂಬಸ್ಥರಿಗೆ ಕಾಡಿನ ಸಮೀಪ ನಾಗಮ್ಮ ಶವ ಸಿಕ್ಕಾಗ ನಡೆದಿರುವ ಘಟನೆ ಗೊತ್ತಾಗಿದೆ.
ಘಟನೆ ಬಳಿಕ ಗ್ರಾಮಸ್ಥರೆಲ್ಲರೂ ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪ್ರಾಣಿಗಳಿಂದಾಗಿ ಜನರ ಪ್ರಾಣ ಹೋಗ್ತಾ ಇದ್ರೂ ಅಧಿಕಾರಿಗಳು ಯಾಕೆ ತಲೆ ಕೆಡಿಸಿಕೊಳ್ತಿಲ್ಲ, ಇನ್ನೆಷ್ಟು ಗ್ರಾಮಸ್ಥರ ಪ್ರಾಣಗಳು ಹೋಗಬೇಕು ಅಂತ ಪ್ರಶ್ನೆ ಮಾಡಿ, ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪರಿಹಾರಕ್ಕೆ ಒಪ್ಪಿಕೊಂಡಿರುವ ಬನ್ನೇರುಘಟ್ಟ ಪಾರ್ಕ್ ಆಡಳಿತ ಮಂಡಳಿ 15 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬನ್ನೇರುಘಟ್ಟ ಪೊಲೀಸರು, ಕಾಡಾನೆ ಸ್ತಳಾಂತರಕ್ಕೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್