
ಬೆಂಗಳೂರು, ಅಕ್ಟೋಬರ್ 12: ಹಲವಾರು ವಿರೋಧದ ನಡುವೆಯೂ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಸಮೀಕ್ಷಕರಾಗಿ ಆಯೋಜಿಸಿಲಾಗಿದೆ. ಈ ಹಿನ್ನೆಲೆ ಸಮೀಕ್ಷೆಗೆಂದು ಹೋದ ವೇಳೆ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಶಿಕ್ಷಕಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ಟಂಟ್ ಅಳವಡಿಸಲಾಗಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಸಮೀಕ್ಷೆಗೆಂದು ಹೋದ ಶಾಲಾ ಶಿಕ್ಷಕಿ ಯಶೋಧ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಇವರು ಬೊಮ್ಮಸಂದ್ರದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಬೊಮ್ಮಸಂದ್ರದ ಗಣತಿಯ ಜವಾಬ್ದಾರಿ ಹೊತ್ತಿದ್ದರು. ಸಮೀಕ್ಷೆ ನಡೆಸುತ್ತಿರುವಾಗಲೇ ಕುಸಿದು ಬಿದ್ದಿದ್ದ ಶಿಕ್ಷಕಿಯನ್ನು ಸ್ಥಳೀಯರು ಕೂಡಲೆ ಆಸ್ಪತ್ರೆಗೆ ರವಾನಿಸಿದ್ದಾರೆ. ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ವೈದ್ಯರು ಆಪರೇಷನ್ ಮಾಡಿ ಸ್ಟಂಟ್ ಅಳವಡಿಸಿದ್ದಾರೆ. ಸಮೀಕ್ಷೆಯ ಕಾರಣದಿಂದಾಗಿ ಗ್ರಾಮದ ಮನೆ ಮನೆಗೆ ತೆರಳಿ ತನಗೊಪ್ಪಿಸಿದ ಕೆಲಸ ಮಾಡುತ್ತಿದ್ದ ಶಿಕ್ಷಕಿ ತೀವ್ರ ಒತ್ತಡದಿಂದ ಹೃದಯಾಗಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ ಜಾತಿಗಣತಿ ಕಾರ್ಯ ವೇಳೆ ಇದುವರೆಗೂ ಮೂವರು ಶಿಕ್ಷಕರು ಸಾವು, ಪರಿಹಾರ ಘೋಷಿಸಿದ ಸಿಎಂ
ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕೆಲಸದಲ್ಲಿ ನಿರತರಾಗಿರುವ ಶಿಕ್ಷಕರು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಬಿಸಿಲು, ಮಳೆ, ಗಾಳಿ ಎನ್ನದೆ ಮನೆ ಮನೆ ಓಡಾಟ ನಡೆಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟ, ನೀರಿಲ್ಲದೆ ಒದ್ದಾಡುತ್ತಿದ್ದಾರೆ. ಸಮೀಕ್ಷೆ ಪೂರ್ಣಗೊಳ್ಳದೆ ಹೋದರೆ ಶಿಕ್ಷಕರಿಗೆ ನೋಟೀಸ್ ಕಳುಹಿಸಲಾಗುತ್ತದೆ. ಇದರ ನಡುವೆ ಅಮಾನತ್ತಿನ ಭಯದಲ್ಲಿ ಹೆಚ್ಚಿನ ಒತ್ತಡ ಅನುಭವಿಸಿ ಈ ಪರಿಸ್ಥಿತಿ ಎದುರಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.