Apple iPhone X: ಆನ್​ಲೈನ್​ನಲ್ಲಿ ಐಫೋನ್ X ಬದಲು ಸೆಕೆಂಡ್ ಹ್ಯಾಂಡ್ ಮೊಬೈಲ್ ಡೆಲಿವರಿ; ಆಮೇಲೇನಾಯ್ತು?

| Updated By: ಸುಷ್ಮಾ ಚಕ್ರೆ

Updated on: Aug 11, 2021 | 12:18 PM

Paytm Mall | ಬೆಂಗಳೂರಿನ ಕಟ್ಟಿಗೇನಹಳ್ಳಿಯವರಾದ ವಿಶಾಖ 2018ರಲ್ಲಿ 88,198 ರೂ. ನೀಡಿ ಆನ್​ಲೈನ್​ನಲ್ಲಿ ಐಫೋನ್ X​ ಆರ್ಡರ್ ಮಾಡಿದ್ದರು. ಬಾಕ್ಸ್​ ಓಪನ್ ಮಾಡಿ ನೋಡಿದರೆ ಅದರಲ್ಲಿ ಈಗಾಗಲೇ ಬೇರೊಬ್ಬರು ಬಳಸಿ ಡ್ಯಾಮೇಜ್ ಆಗಿದ್ದ ಐಫೋನ್ 6ಎಸ್​ ಇತ್ತು.

Apple iPhone X: ಆನ್​ಲೈನ್​ನಲ್ಲಿ ಐಫೋನ್ X ಬದಲು ಸೆಕೆಂಡ್ ಹ್ಯಾಂಡ್ ಮೊಬೈಲ್ ಡೆಲಿವರಿ; ಆಮೇಲೇನಾಯ್ತು?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಆನ್​ಲೈನ್​ ಖರೀದಿಯಲ್ಲಿ ನಾವು ಅಂದುಕೊಂಡ ಗುಣಮಟ್ಟದ ವಸ್ತು ಸಿಗದೇ ಇದ್ದಾಗ ಕೋಪ, ಬೇಸರವಾಗುವುದು ಸಹಜ. ಕೆಲವೊಮ್ಮೆ ಏನೋ ಆರ್ಡರ್ ಮಾಡಿದವರಿಗೆ ಇನ್ನೇನೋ ಸಿಕ್ಕಿ ಅವಾಂತರಗಳಾದ ಪ್ರಸಂಗಗಳೂ ನಡೆದಿವೆ. ಬೆಂಗಳೂರಿನ 24 ವರ್ಷದ ಯುವತಿಯೊಬ್ಬರು ಪೇಟಿಎಂ ಮಾಲ್ (Paytm Mall) ಆ್ಯಪ್​ನಲ್ಲಿ ಹೊಸದಾದ ಐಫೋನ್ X​ (iPhone X) ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬಂದಿದ್ದು 4 ವರ್ಷ ಹಳೆಯ ಈಗಾಗಲೇ ಬೇರೊಬ್ಬರು ಬಳಸಿ ಪಾಸ್​ವರ್ಡ್​ ಹಾಕಿಟ್ಟಿದ್ದ ಸೆಕೆಂಡ್ ಹ್ಯಾಂಡ್ ಮೊಬೈಲ್. ಐಫೋನ್ X ಬದಲಿಗೆ ಡ್ಯಾಮೇಜ್ ಆದ ಐಫೋನ್ 6ಎಸ್​ (iPhone 6S) ಬಂದಿದ್ದು ನೋಡಿ ಆ ಯುವತಿ ಕೆಂಡಾಮಂಡಲರಾಗಿದ್ದಾರೆ. ತನಗಾದ ಮೋಸದ ಬಗ್ಗೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ ಆಕೆಗೆ 88,198 ರೂ. ಹಾಗೂ ಆಕೆಯ ಕೇಸ್ ವಹಿವಾಟಿನ ಖರ್ಚಿಗೆ 5000 ರೂ. ಸೇರಿಸಿ ನೀಡುವಂತೆ ನ್ಯಾಯಾಲಯ ಆ ಐಫೋನ್ ಮಾರಾಟಗಾರರಿಗೆ ಆದೇಶ ನೀಡಿದೆ.

ಬೆಂಗಳೂರಿನ ಕಟ್ಟಿಗೇನಹಳ್ಳಿಯವರಾದ ವಿಶಾಖ ರುಂಗ್ಟ 2018ರಲ್ಲಿ 88,198 ರೂ. ನೀಡಿ ಆನ್​ಲೈನ್​ನಲ್ಲಿ ಐಫೋನ್ X​ ಆರ್ಡರ್ ಮಾಡಿದ್ದರು. ಆ್ಯಪಲ್ ಐಫೋನ್ ನ್ಯೂ ಮಾಡೆಲ್ ಎಂದು ಬರೆದುಕೊಂಡಿದ್ದ ಬಾಕ್ಸ್​ ಓಪನ್ ಮಾಡಿ ನೋಡಿದರೆ ಅದರಲ್ಲಿ ಈಗಾಗಲೇ ಬೇರೊಬ್ಬರು ಬಳಸಿ ಡ್ಯಾಮೇಜ್ ಆಗಿದ್ದ ಐಫೋನ್ 6ಎಸ್​ ಇತ್ತು. ಇದನ್ನು ನೋಡಿ ವಿಶಾಖ ಶಾಕ್ ಆಗಿದ್ದರು. 88 ಸಾವಿರ ರೂ. ಪಂಗನಾಮ ಹಾಕಿದ್ದ ಮಾರಾಟಗಾರರ ವಿರುದ್ಧ ಪೇಟಿಎಂ ಹೆಲ್ಪ್​ಲೈನ್​ಗೆ ಫೋನ್ ಮಾಡಿದರೂ ಅವರು ಸರಿಯಾದ ಸ್ಪಂದನೆ ನೀಡಲಿಲ್ಲ.

ಹೀಗಾಗಿ, ಹೊಸ ಐಫೋನ್ ಬಾಕ್ಸ್​ನಲ್ಲಿ ಹಳೆಯ ಫೋನ್ ಇಟ್ಟು ಕಳುಹಿಸಿದ್ದ ಮಾರಾಟಗಾರರ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ ಅವರು ಗ್ರಾಹಕರ ನ್ಯಾಯಾಲಯಲ್ಲಿ ದೂರು ನೀಡಿದ್ದರು. ಪೇಟಿಎಂ ಇ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಾರಾಟಗಾರರಿಬ್ಬರ ವಿರುದ್ಧವೂ ದೂರು ನೀಡಿದ ವಿಶಾಖ ಅವರಿಗೆ ಇದೀಗ ಜಯ ಸಿಕ್ಕಿದೆ.

ಪೇಟಿಂನ ರಿಜಿಸ್ಟರ್ಡ್​ ಸೆಲ್ಲರ್​ನಿಂದಲೇ ಆ ಮೊಬೈಲ್ ಡೆಲಿವರಿಯಾಗಿದ್ದು, ಈ ರೀತಿ ಗ್ರಾಹಕರಿಗೆ ಮೋಸ ಮಾಡಿರುವ ಪೇಟಿಎಂ ಹಾಗೂ ಮಾರಾಟಗಾರರಿಗೆ ದಂಡ ವಿಧಿಸಬೇಕೆಂದು ವಿಶಾಖ ಪರ ವಕೀಲರು ವಾದಿಸಿದ್ದರು. ಆದರೆ, ಪೇಟಿಎಂ ಯಾವುದೇ ಪ್ರಾಡಕ್ಟ್​ಗಳನ್ನು ಉತ್ಪಾದಿಸುವುದಿಲ್ಲ, ಮಾರಾಟ ಮಾಡುವುದೂ ಇಲ್ಲ. ಅದು ಕೇವಲ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಮಧ್ಯವರ್ತಿಯಾಗಿ ಮಾತ್ರ ಕೆಲಸ ಮಾಡುತ್ತದೆ. ಮಾರಾಟಗಾರರು ದೆಹಲಿಯಿಂದ ಈ ಐಫೋನ್ ಬಾಕ್ಸ್​ ಅನ್ನು ಕೊರಿಯರ್ ಮಾಡಿದ್ದರು. ಅದನ್ನು ಗ್ರಾಹಕರಿಗೆ ನಾವು ತಲುಪಿಸಿದ್ದೇವೆ. ಇದರಲ್ಲಿ ಪೇಟಿಎಂನ ತಪ್ಪೇನೂ ಇಲ್ಲ ಎಂದು ಪೇಟಿಎಂ ಪರ ವಕೀಲರು ವಾದಿಸಿದ್ದರು.

ಈ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಪೇಟಿಎಂನಲ್ಲಿ ಹೆಸರು ರಿಜಿಸ್ಟರ್ ಮಾಡಿಕೊಂಡಿರುವ ದೆಹಲಿಯ ಮಾರಾಟಗಾರರಾದ ನ್ಯೂಜೆನ್ ಪಾರ್ಟನರ್ಸ್​ ತಪ್ಪಿತಸ್ಥರೆಂಬುದು ಖಾತರಿಯಾಗಿದೆ. ಹೀಗಾಗಿ, ಆಕೆ ಈಗಾಗಲೇ ಪಾವತಿ ಮಾಡಿರುವ 88,198 ರೂ. ಹಣ ಹಾಗೂ 5,000 ರೂ. ಸೇರಿಸಿ 45 ದಿನದೊಳಗೆ ಆಕೆಗೆ ಪರಿಹಾರ ನೀಡಬೇಕೆಂದು ಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ: Bengaluru Metro: ಮರಗಳ ಸ್ಥಳಾಂತರಕ್ಕೆ ಹೈಕೋರ್ಟ್ ಒಪ್ಪಿಗೆ; ವೇಗ ಪಡೆದುಕೊಳ್ಳಲಿದೆ ಬೆಂಗಳೂರು ಮೆಟ್ರೋ ಕಾಮಗಾರಿ

Karnataka Weather Today: ಮಲೆನಾಡು, ಕರಾವಳಿಯಲ್ಲಿ ಇನ್ನೆರಡು ದಿನ ಮಳೆ; ಬೆಂಗಳೂರಿನ ಇಂದಿನ ಹವಾಮಾನ ಹೀಗಿದೆ

(Bengaluru Woman who Ordered iPhone X in Paytm Mall gets Damaged iPhone 6S wins Compensation by Seller)